

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳೆಯರನ್ನು ಇಂದಿಗೂ 2ನೇ ದರ್ಜೆಯ ಪ್ರಜೆಯಂತೆ ಸಾಮಾಜಿಕ ವ್ಯವಸ್ಥೆ ಪರಿಗಣಿಸುತ್ತಿರುವುದು ಬದಲಾಗದೆ ಹೋದರೆ ದೇಶದ ಪ್ರಗತಿಗೆ ಮಾರಕವಾಗುವುದು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಶ್ರೀ ಸತ್ಯಸಾಯಿ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ "ಇಂದಿನ ಸ್ತ್ರೀ' ಅಭಿಪ್ರಾಯ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪ್ರಗತಿ ಸಾಧಿಸುತ್ತಿದ್ದರೂ ನ್ಯಾಯಬದ್ಧವಾಗಿ ಸಿಗಬೇಕಾದ ಗೌರವ, ಸ್ಥಾನಮಾನ, ಅವಕಾಶಗಳಿಂದ ವಂಚಿತವಾಗುತ್ತಿದ್ದಾರೆ. ಗ್ರಾಮೀಣ ಮಹಿಳೆ ಪುರುಷನಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರೂ ಅವಳಿಗೆ ನೀಡುವ ಹಣ ಪುರುಷರಿಗಿಂತ ಕಡಿಮೆ. ಇಂತಹ ತಾರತಮ್ಯಗಳನ್ನು ಇಂದಿನ ಮಹಿಳೆಯರು ಯಾಕೆ ಹೀಗೆ ಎಂದು ಅವಲೋಕಿಸಬೇಕು. ಈ ಅಸಮಾನತೆ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ವಿ. ಶಾರದಾ ಅಭಿಪ್ರಾಯ ಮಂಡಿಸಿದರು. ಡಾ. ಅರುಣಾ ಹಳ್ಳಿಕೇರಿ ಮಾತನಾಡಿ, ಸಮಸ್ಯೆಗಳನ್ನು ಮಹಿಳೆ ತಾಳ್ಮೆಯಿಂದ ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಮ್ಮ ಸಮಾಜದಲ್ಲಿ ಕುಟುಂಬ ವ್ಯವಸ್ಥೆ ಹಾಳಾಗುತ್ತದೆ ಎಂದರು.
ಶಾರದಾ ಕೌದಿ, ಜಿ.ಎಂ. ಕೋಟಿಗೌಡರ ಮಾತನಾಡಿದರು. ಕಾಲೇಜಿನ ಅನೇಕ ವಿದ್ಯಾರ್ಥಿನಿಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಉತ್ತಮ ಅಭಿಪ್ರಾಯ ಮಂಡನೆಗಳಿಗೆ ಬಹುಮಾನ ಘೋಷಿಸಲು ಮಂಗಳಾ ಚಿಗಟೇರಿ, ರುದ್ರಾ ಹಟ್ಟಿಹೊಳಿ ಮತ್ತು ಸೌಮ್ಯ ಕೆಂಗಾನವರ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.
ಅಶ್ವಿನಿ ಇಂಚಲ ಅಧ್ಯಕ್ಪತೆ ವಹಿಸಿದ್ದರು. ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಜ್ಯೋತಿ ಭಾವಿಕಟ್ಟಿ ನಿರೂಪಿಸಿದರು.