ಸಹಕಾರ ಸಂಸ್ಥೆಗಳು ರೈತರ ಹಿತ ಕಾಯಲಿ

oplus_0
oplus_0
Published on

ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿಕೆ

ಮುಳಬಾಗಿಲು: ರೈತರು ಸುಖವಾಗಿದ್ದರೆ ದೇಶ ಸುಭಿಕ್ಷೆಯಿಂದ ಕೂಡಿರುತ್ತದೆ. ಸರ್ಕಾರದ ಜತೆಗೆ ಸಹಕಾರ ಸಂಸ್ಥೆಗಳು ರೈತರ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ರೈತರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಮುಳಬಾಗಿಲು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಟಿಎಪಿಸಿಎಂಎಸ್​ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿಮಾರ್ಣಕ್ಕೆ ಈ ಹಿಂದೆ ಸಂಕಲ್ಪ ಮಾಡಲಾಗಿತ್ತು. ಆದರೆ ನಗರಸಭೆಗೆ ಆಸ್ತಿ ತೆರಿಗೆ ಬಾಕಿ ಉಳಿದಿದ್ದರಿಂದ ಜತೆಗೆ ಸಂಘದ ಆರ್ಥಿಕ ಚಟುವಟಿಕೆ ಉತ್ತಮವಾಗಿಲ್ಲದ ಕಾರಣ ಸಂಪನ್ಮೂಲ ಕೊರತೆ ಕಾಡುತ್ತಿತ್ತು. ಹಿಂದೆ ನಗರಸಭೆಗೆ 3 ವರ್ಷದಲ್ಲಿ <42.32 ಲಕ್ಷ ತೆರಿಗೆ ಪಾವತಿಸಲಾಗಿದೆ. ಇ-&ಖಾತೆ ಮಾಡಿಸಿಕೊಂಡು ಹಳೆಕಟ್ಟಡ ಕೆಡವಿ ಹೊಸ ಕಟ್ಟಡ ನಿಮಾರ್ಣಕ್ಕೆ ಎನ್​ಒಸಿ ಪಡೆದು ಸುಮಾರು 20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಾಣಿಜ್ಯ ಕಟ್ಟಡ ನಿಮಾರ್ಣ ಮಾಡಿ ಒಂದೇ ಸೂರಿನಲ್ಲಿ ತಾಲೂಕಿನ ರೈತರಿಗೆ ಮತ್ತು ಸಾರ್ವಜನಿಕರಿಗೆ ಎಲ್ಲ ಸೌಲಭ್ಯ ಸಿಗುವಂತೆ ಮಾಡುವ ಮೂಲಕ ಮಾದರಿಯಾಗಲಿದ್ದೇವೆ ಎಂದು ತಿಳಿಸಿದರು.

ಶಾಸಕ ಸಮೃದ್ಧಿ ವಿ.ಮಂಜುನಾಥ್​ ಮಾತನಾಡಿ, ಮುಳಬಾಗಿಲು ತಾಲೂಕು ಸೊಸೈಟಿ ರಾಜ್ಯದಲ್ಲೇ ಅತ್ಯುತ್ತಮ ಆಸ್ತಿಯಲ್ಲಿ 3 ನೇ ಸ್ಥಾನದಲ್ಲಿದೆ. ಅದರಲ್ಲೂ ನಗರದ ಹೃದಯ ಭಾಗದಲ್ಲಿರುವುದರಿಂದ ಹೈಟೆಕ್​ ವಾಣಿಜ್ಯ ಸಂಕೀರ್ಣ ಕಟ್ಟಿದರೆ ಬಾಡಿಗೆ ಜತೆಗೆ ಸ್ವಂತ ವ್ಯಾಪಾರ ವಹಿವಾಟಿಗೂ ಅನುಕೂಲವಾಗುತ್ತದೆ. ಹೊಸ ಕಟ್ಟಡ ಕಟ್ಟಲು ಮುಂದಾದರೆ ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿಯಲ್ಲಿ 50 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

ಸಂಘದ ನಿರ್ದೇಶಕ ಎಂ.ಆರ್​.ಮುರಳಿ ಮಾತನಾಡಿ, ಸಹಕಾರಿ ನಿಯಮಗಳನ್ನು ಹೇರಿ ಸಾವಿರಾರು ಷೇರುದಾರರನ್ನು ಅನರ್ಹ ಮತದಾರಪಟ್ಟಿಗೆ ಸೇರಿಸಿರುವುದು ಸರಿಯಲ್ಲ. ಯೂರಿಯಾ ಮತ್ತು ಕೃಷಿ ಸಾಮಗ್ರಿ ಖರೀದಿ ಮಾಡಲು ಎಲ್ಲ ರೈತರಿಂದ ಸಾಧ್ಯವಾಗುವುದಿಲ್ಲ. ಎಐಸಿಸಿ ಮಾಜಿ ಅಧ್ಯಕ್ಷ, ಕೇಂದ್ರ ಸರ್ಕಾರದ ವಿಪಕ್ಷ ನಾಯಕ ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​ ಪಕ್ಷ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿರುವಂತೆ ನೀವು ಸಹ ತಾಲೂಕು ಸೊಸೈಟಿಯಲ್ಲಿ ವೋಟ್​ಚೋರ್​ ಮಾಡಬೇಡಿ ಎಲ್ಲರಿಗೂ ಮತದಾನದ ಹಕ್ಕು ನೀಡಿ ಎಂದು ಒತ್ತಾಯ ಮಾಡಿದರು.

ನಿರ್ದೇಶಕ ವಿ. ರಾಜಪ್ಪ, ಸಂಘದ ಮಾಜಿ ಅಧ್ಯಕ್ಷ ಟಿ.ಎಸ್​.ರಮೇಶ್​, ಕೆ.ವಿ. ನಾಗಾರ್ಜುನ, ಬಿಜೆಪಿ ಮುಖಂಡರಾದ ಕೆ. ಅಮರೇಶ್​, ಹೆಚ್​.ಎಸ್​. ಹರೀಶ್​, ಆರ್​.ಕೆ. ವಿಶ್ವನಾಥ್​ ಕುಮಾರ್​, ನಿವೃತ್ತ ಶಿಕ್ಷಕ ಶ್ರೀವಾಸ್​ ಮತ್ತಿತರರು ಅನರ್ಹ ಮತದಾರರ ಪಟ್ಟಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಸಿಬ್ಬಂದಿ ವಿ. ನಾರಾಯಣಸ್ವಾಮಿ, ಕೆ. ನಾರಾಯಣಸ್ವಾಮಿ, ಭಾರ್ಗವಿ, ನಂದಿನಿ, ಬಾಲಾಜಿ, ವೆಂಕಟೇಶ್​ ಬಾಬು, ನವೀನ್​, ಸುಬ್ರಮಣಿ ಸಂಘದ ಮಾಜಿ ಅಧ್ಯಕ್ಷ ಬಲ್ಲ ಜಿ. ರಾಮಕೃಷ್ಣಪ್ಪ, ಹಿರಿಯ ಮುಖಂಡರಾದ ಉತ್ತನೂರು ಶ್ರೀನಿವಾಸ್​, ಜಿ. ರಾಮಲಿಂಗಾರೆಡ್ಡಿ, ಬಿ. ವಿ. ನಾಗಿರೆಡ್ಡಿ, ಅಮಾನುಲ್ಲ, ಎಂ.ಮುನಿರಾಜು, ಎಂ. ವೆಂಕಟರಮಣ, ಪಿ. ವೆಂಕಟೇಶ್​ ಇದ್ದರು.

ಮಾದರಿ ರಾಜಕಾರಣ: ಸಹಕಾರ ಕಾಯ್ದೆ ತತ್ವಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿ ಗೌರವಿಸಬೇಕು . ರಾಜ್ಯ ಮತ್ತು ಜಿಲ್ಲೆಯಲ್ಲಿ ರಾಜಕೀಯ ವಾತಾವರಣ ಬೇರೆ ಇರಬಹುದು. ಇಲ್ಲಿ ನಾವು ಸೌಹಾರ್ದತೆಯಿಂದ ಇರುತ್ತೇವೆ. ಕೊತ್ತೂರು ಸೇರಿ ಇತರೆ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ವಿ. ಆದಿ ನಾರಾಯಣ ಎದುರಿಗೆ ಸಿಕ್ಕರೆ ಇಬ್ಬರು ಕೈ ಕುಲಕಿ ಉಭಯ ಕುಶಲೋಪರಿ ವಿಚಾರಿಸಿ, ಆತ್ಮೀಯತೆ ತೋರುವ ಮೂಲಕ ಮಾದರಿ ರಾಜಕಾರಣ ಮಾಡುತ್ತಿದ್ದೇವೆ ಎಂದು ತಿಳಿಸಿದ ಸಮೃದ್ಧಿ ಮಂಜುನಾಥ್​ ಅಚ್ಚರಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net