

ಸವಣೂರ: ಸಹಕಾರಿ ಸಂಘಗಳಲ್ಲಿರುವ ಹಿರಿಯರು ಕ್ಷೇತ್ರದ ಅಭಿವೃದ್ಧಿಗಾಗಿ ಮಾರ್ಗದರ್ಶನ ಮಾಡಿದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಕಾರಿ ಸಂಘಗಳಲ್ಲಿರುವ ಪದಾಧಿಕಾರಿಗಳು ರೈತರಿಗೆ ಸಾಲ ಕೊಡಿಸಲು ಮುಂದಾಗಬೇಕು. ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಉತ್ತಮ ಬೆಲೆ ನಿಗದಿಪಡಿಸುವ ಬದಲು ಬಿತ್ತನೆ ಬೀಜ ಹಾಗೂ ಗೊಬ್ಬರ ಬೆಲೆ ಏರಿಕೆ ಮಾಡಿದೆ. ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಅವಶ್ಯವಿರುವ ಡಿಎಪಿ ಗೊಬ್ಬರ ಅಭಾವ ಸೃಷ್ಠಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಡಿಎಪಿ ಗೊಬ್ಬರ ಬದಲಾಗಿ ಬಿತ್ತನೆಗೆ ಹೊಂದುವ ಇತರೆ ಗೊಬ್ಬರ ಬಳಕೆಗೆ ರೈತರ ಮನವೊಲಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ರೈತರು ನೆಮ್ಮದಿ ಪಡೆಯುವಂತಾಗಿದೆ ಎಂದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ನಿರ್ದೇಶಕ ಬಿ.ಎಂ. ಪಾಟೀಲ ಮಾತನಾಡಿ, ಅಂದಾಜು 43 ಲಕ್ಷ ರೂ.ಗಳ 7 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿಯೇ ಸವಣೂರ ಪಿಎಲ್ಡಿ ಬ್ಯಾಂಕ್ ಉತ್ತಮ ಕಾರ್ಯ ನಿರ್ವಹಿಸಿ ಪ್ರಶಸ್ತಿ ಹಾಗೂ ಪುರಸ್ಕಾರ ಪಡೆದು ರೈತರ ಅಚ್ಚುಮೆಚ್ಚಿನ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಉಳವಪ್ಪ ದಾಸನೂರ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ, ಸಹಕಾರಿ ರಂಗದಲ್ಲಿ ರಾಜಕೀಯ ಮಾಡದೇ ಸಂಘಗಳನ್ನು ಅಭಿವೃದ್ಧಿಪಡಿಸುವುದು ಅವಶ್ಯವಾಗಿದೆ ಎಂದರು.
ಪಟ್ಟಣದ ಅಡವಿಸ್ವಾಮಿ ಮಠದ ಶ್ರೀ ಕುಮಾರ ಸ್ವಾಮೀಜಿ ಹಾಗೂ ದೊಡ್ಡ ಹುಣಸೆಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚನಬಸಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ರಾಜೇಶ ಮಠಪತಿ, ನಿರ್ದೇಶಕರಾದ ಆನಂದಪ್ಪ ಅಕ್ಕೂರ, ಶ್ರೀಪಾದಗೌಡ ಪಾಟೀಲ, ಬಸವರಾಜ ಸವೂರ, ಸಂಗಮೇಶ ಯರೇಶಿಮಿ, ರಮೇಶ ಅರಗೋಳ, ಈರಪ್ಪ ಲಮಾಣಿ, ನಾಗಪ್ಪ ತಿಪ್ಪಕ್ಕನವರ, ಸುಲೇಮಾನ ಮುರಡಿ, ಈರವ್ವ ಬೋಳಕಟ್ಟಿ, ಗಿರಿಜವ್ವ ಕೆಂಚಣ್ಣವರ, ಭೀಮನಗೌಡ ಪಾಟೀಲ, ವ್ಯವಸ್ಥಾಪಕ ಆರ್.ಎಂ. ಪಾಟೀಲ ಇತರರು ಪಾಲ್ಗೊಂಡಿದ್ದರು. ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ ಗಾಣಗೇರ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಚಳ್ಳಾಳ ಕಾರ್ಯಕ್ರಮ ನಿರ್ವಹಿಸಿದರು.