ಸಮ್ಮೇಳನಗಳು ಸೌಹಾರ್ದದ ವೇದಿಕೆಯಾಗಲಿ

HUN-DEC-5-1(TALENT SCHOOL PROGRAMME)
ಹುಣಸೂರು ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕುವೆಂಪು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷೆ ಗಾನವಿ ಉದ್ಘಾಟಿಸಿದರು. ಮಾನಸಿ ಸುಧೀರ್, ಮಡ್ಡಿಕೆರೆ ಗೋಪಾಲ್, ನವೀನ್‌ರೈ, ಜೆ.ಮಹದೇವ್, ರೇಣುಕಾಪ್ರಸಾದ್ ಇತರರಿದ್ದರು.
Published on

 ಹುಣಸೂರು: ಸಾಹಿತ್ಯ ಸಮ್ಮೇಳನಗಳು ಜಾತಿ, ಮತ, ಪಂಥಗಳ ಎಲ್ಲೆ ಮೀರಿ ಸೌಹಾರ್ದ ಸಾರುವ ವೇದಿಕೆಗಳಾಬೇಕು ಎಂದು ಜಿಲ್ಲಾ ಮಟ್ಟದ 3ನೇ ಕುವೆಂಪು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಗಾನವಿ ಅಭಿಪ್ರಾಯಪಟ್ಟರು.

ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 3ನೇ ಕುವೆಂಪು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಲೆಯ ವಿದ್ಯಾರ್ಥಿನಿಯೇ ಆದ ಗಾನವಿ, ಸರ್ವಾಧ್ಯಕ್ಷೆ ಸ್ಥಾನ ಅಲಂಕರಿಸಿ ಮಾತನಾಡಿದರು.

ಟ್ಯಾಲೆಂಟ್ ವಿದ್ಯಾಸಂಸ್ಥೆ ಕಳೆದ ಮೂರು ವರ್ಷಗಳಿಂದ ಕುವೆಂಪು ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಬೆಳೆಯುವ ಪೈರಿನ ಸುಪ್ತ ಮನಸುಗಳಲ್ಲಿರುವ ಪ್ರತಿಭೆಯನ್ನು ಹೊರತರುವ ಕಾರ್ಯ ನಡೆಸಿದೆ. ಸಾಹಿತ್ಯ ಸಮ್ಮೇಳನದ ಮೂಲಕ ಸಾಂಪ್ರದಾಯಿಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯ, ಪರಂಪರೆ, ಸಂಸ್ಕೃತಿಗಳ ಕುರಿತು ಜ್ಞಾನದ ಬೆಳಕು ನೀಡುತ್ತಿದೆ. ಸಾಹಿತ್ಯ ಸಮ್ಮೇಳನಗಳು ಮಕ್ಕಳ ಜ್ಞಾನಗಂಗೆ ಹೆಚ್ಚಿಸುವ, ಸಮಾಜದಲ್ಲಿ ಸೌಹಾರ್ದತೆ ಸಾರುವ ವೇದಿಕೆಗಳಾಗಬೇಕು. ಆಗ ಮಾತ್ರ ಸಮ್ಮೇಳನಕ್ಕೆ ಸಾರ್ಥಕತೆ ಸಿಗುತ್ತದೆ. ನಮ್ಮ ಶಾಲೆಯು ಇಂತಹ ಸಾಮರಸ್ಯದ ಬದುಕಿಗೆ ಸಮ್ಮೇಳನ ಕೊಂಡಿಯಾಗಿ ನಿಲ್ಲುತ್ತಿರುವುದು ಶ್ಲಾಘನೀಯ ಎಂದರು.

ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ರಾಜ್ಯದಲ್ಲೇ ಮೊದಲಾಗಿ ಟ್ಯಾಲೆಂಟ್ ವಿದ್ಯಾಸಂಸ್ಥೆ ಮಕ್ಕಳ ಸಾಹಿತ್ಯ ಸಮ್ಮೇಳನ ನಡಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಭವಿಷ್ಯದ ಭಂಡಾರ ನೀಡಲು ಮುಂದಾಗಿರುವುದು ಶ್ಲಾಘನೀಯ. ಅರಳುತ್ತಿರುವ ಪ್ರತಿಭೆಗಳನ್ನು ಈಗಿನಿಂದಲೇ ಗುರುತಿಸಿ ಕನ್ನಡ ಸಾರಸ್ವತಲೋಕ ಸಂಪದ್ಭರಿತಗೊಳಿಸುವ ಕಾರ್ಯ ಮಾಡೋಣ ಎಂದರು.

ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ಕವನ ವಾಚಿಸುವ ಮೂಲಕ ಕಾಂತಾರ ಚಿತ್ರದ ಕಲಾವಿದೆ ಮಾನಸ ಸುಧೀರ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಇಂತಹ ವೇದಿಕೆಗಳು ಅವಶ್ಯ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಮಹದೇವ್, ವಿದ್ಯಾಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ನವೀನ್ ರೈ ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಸಂವಿಧಾನ ವೃತ್ತದಿಂದ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಕನ್ನಡದ ಬಾವುಟ ಹಿಡಿದ ಶಾಲೆಯ ನೂರಾರು ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಸಂಸ್ಥೆಯ ನಿರ್ದೇಶಕ ಡಾ.ಶ್ರೀನಾಥ್, ನಿರ್ದೇಶಕ ಮಂಜುನಾಥ್, ಪ್ರಾಂಶುಪಾಲ ಮಂಜುನಾಥ್, ಅಧ್ಯಾಪಕರಾದ ತ್ರಿವೇಣಿ, ಚಂದ್ರು, ರೇಣುಕಾಪ್ರಸಾದ್, ಸಾಹಿತಿ ಜೆ.ಮಹದೇವ್, ಆರ್.ಆನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net