ತೆಂಗಿಗೆ ಸಿಗಲಿ ಹೆಚ್ಚಿನ ಮಾನ್ಯತೆ, ಮಹತ್ವ

Tengu
Published on

ಕುಮಟಾ: ಇಲ್ಲಿನ ಕೃಷಿ ಇಲಾಖೆಯ ಆವಾರದಲ್ಲಿರುವ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಕಾರ್ಯಾಲಯದಲ್ಲಿ ಮಂಗಳವಾರ ವಿಶ್ವ ತೆಂಗು ದಿನ ಆಚರಿಸಲಾಯಿತು.

ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಗತಿಪರ ಕೃಷಿಕ ವೆಂಕಟಾಚಲ ಭಟ್ ಮಾತನಾಡಿ, ಕಲ್ಪವೃಕ್ಷವೆಂದೇ ವರ್ಣಿತವಾದ ತೆಂಗು ದೈನಂದಿನ ಪೂಜೆ, ಆಹಾರ ಸೇರಿದಂತೆ ಸಂಪೂರ್ಣ ಮರವೇ ಬಹೂಪಯೋಗಿಯಾಗಿದೆ. ತೋಟಿಗರ ಪಾಲಿಗೆ ಪ್ರಮುಖ ಆದಾಯ ಬೆಳೆಯಾಗಿದೆ. ತೆಂಗಿಗೆ ಇನ್ನೂ ಹೆಚ್ಚಿನ ಮಾನ್ಯತೆ, ಮಹತ್ವ ಹಾಗೂ ಬೆಂಬಲ ಸಿಗಬೇಕಿದೆ. 2009ರಲ್ಲಿ ವಿಶ್ವ ತೆಂಗು ದಿನಾಚರಣೆಯನ್ನು ಏಷಿಯನ್ ಫೆಸಿಫಿಕ್ ಕೋಕೊನಟ್ ಕಮೂನಿಟಿ ವತಿಯಿಂದ ಮೊದಲ ಬಾರಿ ಆಚರಿಸಲಾಯಿತು ಎಂದರು.

ನಿವೃತ್ತ ಕೃಷಿ ಅಧಿಕಾರಿ ಎಸ್.ವಿ. ಹೆಗಡೆ ಭದ್ರನ್ ಮಾತನಾಡಿ, ತೆಂಗಿನ ಉಪಯೋಗ ಇನ್ನೂ ಹೆಚ್ಚಿಗೆ ಆಗಬೇಕು. ಸ್ಥಳೀಯವಾಗಿ ತೆಂಗಿನ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ನಿರ್ಮಾಣಕ್ಕೆ ಕಾರ್ಯಕ್ರಮಗಳು ಹೆಚ್ಚಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಗಣಪತಿ ನಾಯ್ಕ, ತೆಂಗಿನ ಸಂಬಂಧಿತ ಉತ್ಪನ್ನಗಳ ಸಮಗ್ರ ಅಭಿವೃದ್ಧಿಗಾಗಿ 1981 ಜನೆವರಿ 12 ತೆಂಗು ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಿತು. ನಮ್ಮ ಸಂಸ್ಥೆಯಿಂದ ತೆಂಗು ಅಭಿವೃದ್ಧಿ ಮಂಡಳಿಯ ಯೋಜನೆಗಳನ್ನು ಕರಾವಳಿ ತಾಲೂಕುಗಳಿಗೆ ನೀಡುತ್ತಿದ್ದೇವೆ. ಎರೆಹುಳು ತಯಾರಿಕೆ ಘಟಕ, ಮರ ಏರುವವರಿಗೆ ತರಬೇತಿ, ವಿಮೆ ಹಾಗೂ ತೆಂಗಿನ ಮರಗಳಿಗೆ ಪೋಷಕಾಂಶ ನೀಡುವ ಕಾರ್ಯಕ್ರಮವನ್ನು ನೀಡುತ್ತಿದ್ದೇವೆ ಎಂದರು.

ಓಷಿಯನ್ ಎಡ್ಜ್ ಮುಖ್ಯಸ್ಥ ನಿತಿನ್ ಶ್ರೇಯನ್ ಮಾತನಾಡಿದರು. ನಿವೃತ್ತ ಕೃಷಿ ಅಧಿಕಾರಿ ಸಿ.ಎಂ. ಪಟಗಾರ, ಎವಿಪಿ ಸಂಸ್ಥೆಯ ನಿರ್ದೇಶಕ ಕೃಷ್ಣ ನಾಯ್ಕ, ತಿಮ್ಮಣ್ಣ ಭಟ್, ಈಶ್ವರ ಕೊಡಿಯಾ, ಸದಾನಂದ ಪಟಗಾರ ಇತರರು ಇದ್ದರು. ತಿಮ್ಮಣ್ಣ ಭಟ್ ಸ್ವಾಗತಿಸಿದರು. ಧನಂಜಯ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net