ಸಿಎಂ ಸಿದ್ದರಾಮಯ್ಯ ತಕ್ಷಣವೇ ರಾಜೀನಾಮೆ ನೀಡಲಿ

Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೇರ ಮುಡಾ ಆರೋಪ ಇರುವುದರಿಂದ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷ ಶಾಸಕ ಸಿಮೆಂಟ್ ಮಂಜುನಾಥ್ ಒತ್ತಾಯಿಸಿದರು.
ತಮ್ಮ ತಪ್ಪು ಇಲ್ಲವಾದರೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ತಪ್ಪು ಇಲ್ಲ ಎಂದರೆ ಮತ್ತೆ ಮುಖ್ಯಮಂತ್ರಿ ಆಗಬಹುದು. ಆದರೆ ತನಿಖೆ ಎದುರಿಸದೆ ರಾಜ್ಯಪಾಲರ ಮೇಲೆ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಜೈಲಿಗೆ ಹೋದರೂ ಸೀಟು ಬಿಡುವುದಿಲ್ಲ ಎಂಬ ಮನಸ್ಥಿತಿಯನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೊಂದಿದಂತಿದೆ. ಡಿ.ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಿಕೊಳ್ಳುವ ಸಿದ್ದರಾಮಯ್ಯ ಅವರು ಅಧಿಕಾರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯಪಾಲರು ಒಬ್ಬ ದಲಿತ ವ್ಯಕ್ತಿ ಎಂಬ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್ಸಿಗರು ಅವರ ಅವಹೇಳನ ಮಾಡುತ್ತಿರುವ ಸಂಶಯ ಬರುತ್ತಿದೆ. ಒಬ್ಬ ಪರಿಶಿಷ್ಟ ಪಂಗಡದ ಹೆಣ್ಣು ಮಗಳು ರಾಷ್ಟ್ರಪತಿಗಳ ಹುದ್ದೆಗೆ ಏರಿದಾಗ ಕಾಂಗ್ರೆಸ್‌ನವರು ಏಕವಚನದಲ್ಲಿ ಸಂಬೋಧಿಸಿದ್ದರು. ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ದಲಿತರ ಮತ ಬೇಕೆ ವಿನಾ, ಅಭಿವೃದ್ಧಿ ಬೇಡ ಎಂದು ಟೀಕಿಸಿದರು.
ದಲಿತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಎಸ್‌ಇಪಿ, ಟಿಎಸ್ ಹಣ ದುರುಪಯೋಗ, ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ತಕ್ಷಣ ದಲಿತರ ಹಣ ಲೂಟಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಪಾಲರನ್ನು ಏಕವಚನದಲ್ಲಿ ನಿಂದಿಸಿ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ. ಇಂತಹ ಕಾರ್ಯ ಮಾಡಿದವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕಿತ್ತು. ಆದರೆ ಪೊಲೀಸರು ಸರ್ಕಾರದ ಕೈ ಗೊಂಬೆಯಾಗಿ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಐವನ್ ಡಿಸೋಜಾ ರಾಜ್ಯಪಾಲರ ಮನೆಗೆ ನುಗ್ಗಿ ಎಳೆದು ಹಾಕುತ್ತೇವೆ ಎಂದು ಪ್ರಚೋದನಾತ್ಮಕ ಭಾಷಣ ಮಾಡುತ್ತಾರೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಮಾಡುವ ಅಗೌರವಲ್ಲ, ಇದು ನೀವು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡುವ ಅಗೌರವ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ನಗರಾಧ್ಯಕ್ಷ ಅಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಶಾಸಕ ಹರ್ಷವರ್ಧನ್, ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಎಸ್‌ಸಿ ಮತ್ತು ಎಸ್‌ಟಿ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net