

ಚಿಕ್ಕಬಳ್ಳಾಪುರ: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಮೊದಲು ನೈತಿಕತೆ ಹೊಣೆಯನ್ನು ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಸಂಸದ ಡಾ ಕೆ.ಸುಧಾಕರ್ ಒತ್ತಾಯಿಸಿದ್ದಾರೆ.
ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕೈಗೊಂಡಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದೊಡ್ಡ ಹಗರಣ ನಡೆದಿದೆ. ತಳ ಸಮುದಾಯದ ಕಲ್ಯಾಣಕ್ಕಾಗಿ ಅನುದಾನವನ್ನು ಬಳಸಬೇಕು. ಆದರೆ, ಇದರಲ್ಲಿ ತೆಲಂಗಾಣದ ವಿಧಾನಸಭಾ ಚುನಾವಣೆಯ ಖರ್ಚು, ಮದ್ಯ ಮತ್ತು ಕಾರು ಖರೀದಿಯಾಗಿರುವುದು ದೊಡ್ಡ ದೌರ್ಭಾಗ್ಯ. ಉಚಿತ ಭಾಗ್ಯ ಯೋಜನೆಗಳನ್ನು ಕೊಡುವುದಾಗಿ ಹೇಳಿ, ಎಂತಹ ಪರಿಸ್ಥಿತಿಯನ್ನು ತಂದಿದೆ ಎಂದು ವ್ಯಂಗ್ಯವಾಡಿದರು.
ಆರ್ಥಿಕ ಇಲಾಖೆಯ ಜವಾಬ್ದಾರಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದೆ. ಕೋಟ್ಯಂತರ ರೂ ಅನುದಾನ ಕೊಳ್ಳೆ ಹೊಡೆದಿರುವ ಅವ್ಯವಹಾರ ಪ್ರಕರಣವು ಇವರ ಗಮನಕ್ಕೆ ಬಂದಿದೆ. ಇದಕ್ಕೆ ನೈತಿಕತೆ ಏನಾದರೂ ಇದ್ದಲ್ಲಿ ಮೊದಲು ರಾಜೀನಾಮೆಯನ್ನು ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಆಪೆಕ್ಸ್ ಬ್ಯಾಂಕಿನಲ್ಲಿ 2 ಸಾವಿರಕ್ಕೂ ಹೆಚ್ಚು ಅನರ್ಹರಿಗೆ ಸಾಲವನ್ನು ಮಂಜೂರು ಮಾಡಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರ ಹಣ ಲೂಟಿಯಾಗುತ್ತಿದೆ. ಕಾಂಗ್ರೆಸ್ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಆಡಳಿತದ ಬಗ್ಗೆ ಹೇಳಿತ್ತು. ಆದರೆ, ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದು ಜನರಿಗೆ ಅರಿವಾಗುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಯಾವ ವರ್ಗದ ಜನರು ಸಂತೃಪ್ತಿಯಿಂದ ಇಲ್ಲ. ರೈತರಿಗೆ ನೀಡಬೇಕಾದ ಪ್ರೋತ್ಸಾಹ ಧನವನ್ನು ಹಲವು ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದು ನಷ್ಟದಲ್ಲಿರುವ ಅನ್ನದಾತರರು ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಕೈಗಾರಿಕಾಭಿವೃದ್ಧಿ ಹೆಸರಿನಲ್ಲಿ ಶಿಡ್ಲಟ್ಟ ಸೇರಿದಂತೆ ವಿವಿಧೆಡೆ ರೈತರ ಕೃಷಿ ಜಮೀನು ಸ್ವಾಧಿನಪಡಿಸಿಕೊಳ್ಳುತ್ತಿದೆ. ಹಿಂದೆ ಅಧೀನಕ್ಕೆ ತೆಗೆದುಕೊಂಡಿರುವ ಪ್ರದೇಶದಲ್ಲಿಯೇ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.