

ಚಿತ್ರದುರ್ಗ: ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯ ಸದೃಢವಾಗಿರುತ್ತದೆ. ಹೀಗಾಗಿ ಸ್ವಚ್ಛತೆಯೊಂದಿಗೆ ಸುಂದರ ವಾತಾವರಣ ನಿರ್ಮಿಸುವುದೇ ನಮ್ಮೆಲ್ಲರ ಆದ್ಯತೆಯಾಗಲಿ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಜಿಪಂ, ಜಿಲ್ಲಾಡಳಿತ ವತಿಯಿಂದ ಜನರಲ್ಲಿ ಶುದ್ಧ ಕುಡಿಯುವ ನೀರು, ವೈಯಕ್ತಿಕ ಸ್ವಚ್ಛತೆ, ಪರಿಸರ ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುವ ಸಪ್ತಾಹಕ್ಕೆ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಕವಾಡಿಗರಹಟ್ಟಿಯಲ್ಲಿ ಸಂಭವಿಸಿದ ಅಹಿತಕರ ಘಟನೆ ಇಡೀ ರಾಜ್ಯದಲ್ಲೇ ಗಂಭೀರ ಪ್ರಕರಣವಾಗಿದೆ. ಜಿಲ್ಲೆಯ ಎಲ್ಲ ವರ್ಗದ ಜನರು ಆರೋಗ್ಯದಿಂದ ಇರಬೇಕು. ಹೀಗಾಗಿ ಇದೊಂದು ವಿಶೇಷ ಸಪ್ತಾಹವಾಗಿದ್ದು, ಮುಂದೆಂದೂ ಮರುಕಳಿಸದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜನಪ್ರತಿನಿಧಿಗಳು, ಅಧಿಕಾರಿಗಳದ್ದಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯ ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಜಿಲ್ಲೆಯ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಪ್ತಾಹ ಆಯೋಜಿಸಲಾಗಿದೆ ಎಂದು ಹೇಳಿದರು.
ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಉತ್ತಮ ಆರೋಗ್ಯಕ್ಕಾಗಿ ನಮ್ಮೂರಿನ ಪರಿಸರ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.