ಸ್ವಚ್ಛತೆ ಪ್ರತಿಯೊಬ್ಬರ ಉಸಿರಾಗಲಿ

SVR SWACHHATE
Published on

ಸವಣೂರ: ಸ್ವಚ್ಛತೆ ಪ್ರತಿಯೊಬ್ಬರ ಉಸಿರು ಆದಾಗ ಮಾತ್ರ ಪಟ್ಟಣವನ್ನು ಪುರಸಭೆ ವತಿಯಿಂದ ಸ್ವಚ್ಛತೆಗೊಳಿಸಲು ಸಾಧ್ಯ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು.

ಪಟ್ಟಣದ ಶುಕ್ರವಾರ ಪೇಟೆಯಲ್ಲಿ ಜಿಲ್ಲಾಡಳಿತ ಹಾಗೂ ಪುರಸಭೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಚ್ಛತಾ ಅಭಿಯಾನ ಮತ್ತು ತೆರಿಗೆ ವಸೂಲಾತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪುರಸಭೆ ವತಿಯಿಂದ ನಾಗರಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಪಟ್ಟಣದ ಪ್ರತಿ ವಾರ್ಡ್​ಗಳಲ್ಲಿ ಪುರಸಭೆಯ ಸರ್ವ ಸದಸ್ಯರು, ಸಿಬ್ಬಂದಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯ ನಡೆಯಲಿದೆ. ಸವಣೂರ ಪಟ್ಟಣಕ್ಕೆ ವಿಶೇಷ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಸವಣೂರ ಅಭಿವೃದ್ಧಿಗಾಗಿ 10 ಕೋಟಿ ರೂ. ವಿಶೇಷ ಅನುದಾನ ಘೊಷಿಸಿದೆ. ಸಾರ್ವಜನಿಕರು ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಮ್ಮ ಆಸ್ತಿಯ ತೆರಿಗೆ ಹಣವನ್ನು ಕಡ್ಡಾಯವಾಗಿ ತುಂಬುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಅಭಿವೃದ್ಧಿಯೊಂದಿಗೆ ಸ್ವಚ್ಛತೆ ನಿರ್ವಹಣೆಗಾಗಿ ಸ್ಥಳೀಯರ ಸಹಕಾರ ಅವಶ್ಯವಾಗಿದೆ ಎಂದರು.

ಪಟ್ಟಣದ ವಿವಿಧ ವಾರ್ಡ್​ಗಳಲ್ಲಿನ ಕೊಳಚೆ ಪ್ರದೇಶಗಳಿಗೆ ಶಾಸಕ ಪಠಾಣ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲಿಸಿದರು. ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ, ತಹಸೀಲ್ದಾರ್ ಭರತರಾಜ್ ಕೆ.ಎನ್., ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಮುಖ್ಯ ಇಂಜಿನಿಯರ್ ನಾಗರಾಜ ಮಿರ್ಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಪುರಸಭೆ ಸದಸ್ಯರಾದ ಪೀರಅಹ್ಮದ್ ಗವಾರಿ, ಅಶೋಕ ಮನ್ನಂಗಿ, ಬಾಬು ಪರಾಶ, ಅಜೀಮ್ ಮಿರ್ಜಾ, ಉಮೇಶ ಕಲ್ಮಠ, ಅತಾವುಲ್ಲಾಖಾನ್ ಪಠಾಣ ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net