ಸ್ವಚ್ಛತೆಯಲ್ಲಿ ಚಿತ್ರದುರ್ಗ ರಾಜ್ಯಕ್ಕೆ ಮಾದರಿಯಾಗಲಿ

B.S.Pateel
Published on

ಚಿತ್ರದುರ್ಗ: ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಸದೃಢವಾಗಿರಲು ಸಾಧ್ಯ. ಆದ್ದರಿಂದ ನಮ್ಮ ನಗರವನ್ನು ಸುಂದರವಾಗಿ ಇಟ್ಟುಕೊಳ್ಳಬೇಕೆನ್ನುವ ಅರಿವು ಪ್ರತಿಯೊಬ್ಬ ನಾಗರಿಕರಲ್ಲೂ ಮೂಡಿಸಿ ಐತಿಹಾಸಿಕ ಕೋಟೆನಗರಿಯನ್ನು ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಅಧಿಕಾರಿಗಳಿಗೆ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಸಲಹೆ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ನಗರ ಅಲೆದಾಡಿದರೂ ಕಸ ಸಂಗ್ರಹದ ಬುಟ್ಟಿಗಳು ಕಾಣಲಿಲ್ಲ. ಎಲ್ಲೆಂದರಲ್ಲಿ ಗಲೀಜು ಸೃಷ್ಟಿಸುವುದು ಶೋಭೆ ತರುವಂತದಲ್ಲ. ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಮೂರು ದಿನಗಳ ಬಳಿಕ ಮತ್ತೆ ನಗರ ಸಂಚಾರ ನಡೆಸಲಿದ್ದು, ಅಷ್ಟರೊಳಗೆ ವ್ಯವಸ್ಥೆ ಬದಲಾಗಬೇಕು. ಈಗಾಗಲೇ ಒಬ್ಬ ಅಧಿಕಾರಿ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡಿದ್ದೇವೆ. ಬೇರೆಯವರು ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಕಿವಿಮಾತು ಹೇಳಿದರು.

ಸ್ವಚ್ಛತಾ ವಿಚಾರವನ್ನು ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದ್ದು, ಮೇಲ್ವಿಚಾರಣೆ ನಡೆಸಲಾಗುವುದು. ಸ್ಥಳೀಯ ಅಧಿಕಾರಿಗಳು ಆಗಿಂದಾಗ್ಗೆ ವರದಿ ಸಲ್ಲಿಸಬೇಕು. ಪ್ರತಿಯೊಬ್ಬರ ಜೀವ ಅಮೂಲ್ಯವಾಗಿದ್ದು, ದುರ್ಘಟನೆ ಮರುಕಳಿಸಬಾರದು. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.

  • ಜನರ ಆತಂಕ ದೂರ ಮಾಡಿ: ಕವಾಡಿಗರ ಹಟ್ಟಿ ಘಟನೆ ಬಳಿಕ ನೀರು ಕುಡಿಯಲು ಕೆಲವೆಡೆ ನಾಗರಿಕರು ಭಯ ಪಡುತ್ತಿದ್ದಾರೆ. ಈಗಲೂ ಬೆರಳೆಣಿಕೆಯಷ್ಟು ಮಂದಿ ಹೊಟ್ಟೆನೋವು ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಂತಿ-ಭೇದಿ ನಿಯಂತ್ರಣದಲ್ಲಿದ್ದು, ಇಂತಹ ಸಂದರ್ಭಗಳಲ್ಲಿ ನಾಗರಿಕರ ಆತಂಕ ದೂರ ಮಾಡಬೇಕೆ ಹೊರತು ಭಯದ ವಾತಾವರಣ ಸೃಷ್ಟಿಸಬಾರದು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್, ಡಿವೈಎಸ್‌ಪಿ ಮೃತ್ಯುಂಜಯ, ಡಿಎಚ್‌ಒ ಡಾ.ಆರ್.ರಂಗನಾಥ್, ಪ್ರಭಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೇವರಾಜ್ ಇತರರಿದ್ದರು. ಶುದ್ಧೀಕರಣ ಘಟಕ ಸ್ಥಾಪಿಸಿ: ನಗರದ ಮಲ್ಲಾಪುರ, ಮುರುಘಾಮಠ ಮುಂಭಾಗದ ಕೆರೆಗಳಿಗೆ ಚರಂಡಿ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಅಲ್ಲಿಯ ಕೊಳವೆಬಾವಿಗಳ ನೀರು ಜನ, ಜಾನುವಾರು ಕುಡಿಯುಲು ಯೋಗ್ಯವಾಗಿಲ್ಲ ಎಂಬ ದೂರುಗಳಿವೆ. ಆದ್ದರಿಂದ ಶುದ್ಧೀಕರಣ ಘಟಕ ಸ್ಥಾಪಿಸಿ ಎಂದು ಬಿ.ಎಸ್.ಪಾಟೀಲ್ ಸೂಚಿಸಿದರು. ಚರಂಡಿ ನೀರು ಸ್ವಚ್ಛವಾದ ಬಳಿಕ ಕೆರೆಗಳಿಗೆ ಬಿಡುವ ಕೆಲಸವಾಗಬೇಕು. ಕೆರೆಗಳು ಮಲೀನಗೊಂಡಿರುವ ವರದಿಯನ್ನು ಪರಿಸರ ಅಧಿಕಾರಿಗಳಿಂದ ಪಡೆದು, ಪರಿಶೀಲನೆ ನಡೆಸಿ ಸಮಗ್ರ ವರದಿ ಕಚೇರಿಗೆ ಕಳುಹಿಸಿ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net