ಮಕ್ಕಳ ಪ್ರತಿಭೆ ಗುರುತಿಸುವ ಕೆಲಸವಾಗಲಿ

1 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳ ಸೇವೆಯಲ್ಲಿ ಭಗವಂತನನ್ನು ಕಾಣುವ, ಮಕ್ಕಳ ಬಗೆಗೆ ಅಪಾರ ಕಾಳಜಿ ಹೊಂದಿರುವ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರ ಕಾರ್ಯ ಅನನ್ಯ. ನಾಡಿನ ಬಾಲಮಂದಿರದ ಮಕ್ಕಳನ್ನು ನಿಸರ್ಗದ ಮಡಿಲಿನಲ್ಲಿ ಕರೆತಂದು, ಮಕ್ಕಳ ಸೃಜನಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಅವರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ತಾಲೂಕಿನ ಹಳ್ಳಿಗೇರಿ ಬಳಿಯ ನೇಚರ್​ ಫಸ್ಟ್​ ಇಕೋ ವಿಲೇಜ್​ನಲ್ಲಿ 10 ಜಿಲ್ಲೆಗಳಿಂದ ಆಗಮಿಸಿದ್ದ ಬಾಲ ಮಂದಿರದ ಮಕ್ಕಳಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಕಥಾ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಲ್ಲಿ ಆತ್ಮಸ್ಥೆರ್ಯ, ರಾಷ್ಟ್ರಪ್ರೇಮ ಮತ್ತು ಮಾನವೀಯ ಮೌಲ್ಯಗಳನ್ನು ಸಾಹಿತ್ಯದ ಓದು, ಬರಹ, ಸಂಗೀತದಂತಹ ಮಾಧ್ಯಮಗಳ ಮೂಲಕ ಸಂಸ್ಕಾರ ನೀಡಿ ಬೆಳೆಸಬೇಕು ಎಂದರು.
ತಹಸೀಲ್ದಾರ ಡಿ.ಎಚ್​. ಹೂಗಾರ ಮಾತನಾಡಿ, ಬಾಲ ಮಂದಿರದ ವಿಶೇಷ ಮಕ್ಕಳ ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ಸಂಗಮೇಶ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ನಮಗಿರುವ ನ್ಯೂನ್ಯತೆಗಳನ್ನು ಬದಿಗಿಟ್ಟು, ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಮಕ್ಕಳೆಲ್ಲರೂ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಬೇಕು. ಮಕ್ಕಳ ಸಾಧನೆಯ ಕಥೆಗಳನ್ನು ಜಗತ್ತು ಓದುವಂತಾದಾಗ ನಮ್ಮೆಲ್ಲರ ಪ್ರಯತ್ನ ಸಾರ್ಥಕವಾಗುತ್ತದೆ ಎಂದರು.
ಮಲ್ಲನಗೌಡ ಪಾಟೀಲ, ಬಸವರಾಜ ಮರಿತಮ್ಮನವರ, ರವೀಂದ್ರ ರತ್ನಾಕರ, ದೀಪಾ ಜಾವೂರ, ಪುಷ್ಪ ಹಂಜಗಿ, ಸ್ವರ್ಣಲತಾ ಮಠದ, ಮಕ್ಕಳು, ನಿಲಯ ಪಾಲಕರು, ಇತರರು ಇದ್ದರು.
ಭಾರತಿ ಶೆಟ್ಟರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net