ಮಕ್ಕಳ ಪ್ರತಿಭೆ ಗುರುತಿಸುವ ಕೆಲಸವಾಗಲಿ

9 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲಾ ಸಂಘಟನೆಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಘಟನೆ ಪದಾಧಿಕಾರಿಗಳು ಒಟ್ಟಾಗಿ ಸೇರಿ ಕೆಲಸ ಮಾಡಿದಾಗ ಮಾತ್ರ ಸಂಘಟನೆಗಳು ಯಶಸ್ಸು ಕಾಣಲು ಸಾಧ್ಯ ಎಂದು ಆಕಾಶವಾಣಿ ಉದ್ಘೋಷಕ ಡಾ. ಶಶಿಧರ ನರೇಂದ್ರ ಹೇಳಿದರು.
ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತಿಚೆಗೆ ನಗರದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಏರ್ಪಡಿಸಿದ್ದ ನೀರ್ ಬಾರ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಕಲಾವಿದರನ್ನು ಗುರುತಿಸುವುದು ಎಲ್ಲರ ಕರ್ತವ್ಯ. ನಾಟಕಗಳು ಉತ್ತಮ ಸಂದೇಶ ನೀಡುವ ಕಲೆಯಾಗಿದ್ದು, ಸಮಾಜದಲ್ಲಿ ಇವುಗಳಿಂದ ಕಲಿಯುವುದು ಸಾಕಷ್ಟಿದೆ ಎಂದರು.
ಶರಬೇಂದ್ರಸ್ವಾಮಿ ಮಾತನಾಡಿ, ಕಲೆಯನ್ನು ಗುರುತಿಸುವುದು ಸಂಘ ಸಂಸ್ಥೆಗಳಿಂದ ಮಾತ್ರ ಸಾಧ್ಯ. ಒಂದು ಸಂಘ ತಾವು ಹಾಕಿಕೊಂಡ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತಂದಾಗಲೇ ಉತ್ತಮ ಕಾರ್ಯಕ್ರಮಗಳು ಮೂಡಿಬರಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಬಾಳಪ್ಪ ಚಿನಗುಡಿ ಮಾತನಾಡಿ, ಮಕ್ಕಳಲ್ಲಿ ಒಂದಿಲ್ಲ ಒಂದು ಕಲೆ ಇದ್ದು, ಸೂಕ್ತ ಸಮಯದಲ್ಲಿ ಗುರುತಿಸಿ ಬೆಳೆಸಿದರೆ ಉತ್ತಮ ನಾಗರಿಕರಾಗಲಿದ್ದಾರೆ. ವಿಜ್ಞಾನದಂತಹ ಕಲೆಯುಳ್ಳ ಉತ್ತಮ ನಾಟಕಗಳಲ್ಲಿ ಮಕ್ಕಳು ಅಭಿನಯಿಸುವುದರಿಂದ ಮಕ್ಕಳ ಬುದ್ದಿಮಟ್ಟ ಉನ್ನತಕ್ಕೆ ಬೆಳೆಯಲಿದೆ ಎಂದರು.
ವೀರಣ್ಣ ಹೊಸಮನಿ ಅವರಿಗೆ ಸನ್ಮಾನಿಸಲಾಯಿತು. ಕಿರಣ ಮಹಾಲೆ, ಕೃತಿಕಾ ಮಹಾಲೆ, ಸ್ನೇಹಾ ಮಹಾಲೆ, ಇತರರು ಇದ್ದರು.
ಶೃತಿ ಹುರಳಿಕೊಪ್ಪ ಸ್ವಾಗತಿಸಿದರು. ಸಂತೋಷ ಮಹಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಲಕ್ಷ್ಮೀ ಎಚ್. ನಿರೂಪಿಸಿದರು. ಸಿಕಂದರ ದಂಡಿನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net