ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿ

15 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕ್ಕಳನ್ನು ಬರೀ ಓದಲು ಒತ್ತಾಯಿಸದೆ ಆಟೋಟಗಳಲ್ಲಿ ಭಾಗವಹಿಸಲು ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಸಹಾಯಕ ಪೊಲೀಸ್​ ಆಯುಕ್ತ ಪ್ರಶಾಂತ ಸಿದ್ದನಗೌಡರ ಹೇಳಿದರು.

ನಗರದ ಆರ್​.ಎನ್​. ಶೆಟ್ಟಿ ಕ್ರೀಡಾಂಗಣದಲ್ಲಿ ಹು-ಧಾ ಬಂಟರ ಸಂಘದ ವತಿಯಿಂದ ಏರ್ಪಡಿಸಿದ್ದ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮಕ್ಕಳನ್ನು ಅಂಕಗಳಿಸಲು ನಿರಂತರವಾಗಿ ಒತ್ತಡ ಹೇರುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಅವರು ದೈಹಿಕವಾಗಿ ಬೆಳವಣಿಗೆ ಹೊಂದುತ್ತಿಲ್ಲ. ದಿನದಲ್ಲಿ 1 ಗಂಟೆ ಸಮಯವನ್ನು ಕ್ರೀಡೆಗೆ ಮೀಸಲಿರಿಸಲು ಪಾಲಕರು ಆಸಕ್ತಿ ತೋರಿಸಬೇಕು ಎಂದರು.

ಹೋಟೆಲ್​ ಒಡೆಯರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಟರು ಮೂಲತಃ ಕೃಷಿಕರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಮಕ್ಕಳನ್ನು ಕೃಷಿಯಲ್ಲಿ ತೊಡಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೈಹಿಕ ಕ್ಷಮತೆ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಕ್ರೀಡಾಡಾಕೂಟದಲ್ಲಿ ಬಂಟ ಸಮುದಾಯದ ಎಲ್ಲರೂ ಭಾಗವಹಿಸುತ್ತಿರುವುದು ಸಂತಸದ ಸಂಗತಿ ಎಂದರು.

ಬಂಟರ ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ ಶೆಟ್ಟಿ, ರಾಜೇಂದ್ರ ಶೆಟ್ಟಿ, ರತ್ನಾಕರ ಎಂ.ಕೆ., ಬಂಟ ಸಮಾಜದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

ಪ್ರದಿಪ ಪಕ್ಕಳ ಸ್ವಾಗತಿಸಿದರು. ಸುರೇಶ ಹೆಗಡೆ ನಿರೂಪಿಸಿದರು. ಹರ್ಷಕುಮಾರ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net