

ಬೀಳಗಿ: ಪಠ್ಯೇತರ ಚಟುವಟಿಕೆ ಜತೆಗೆ ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಕ್ರೀಡಾ ಚಟುವಟಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಸಮೀಪದ ಗಡದಿನ್ನಿ ಗ್ರಾಮದ ಪುನರ್ವಸತಿ ಕೇಂದ್ರದ ವೀರ ಸಿಂಧೂರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳ ತಾಲೂಕುಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹ ಆರೋಗ್ಯ ಸದೃಢಗೊಂಡು ಚೈತನ್ಯಗೊಳ್ಳಲಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ಮಕ್ಕಳು ಒಂದೇ ಎನ್ನುವ ಭಾವನೆ ಶಿಕ್ಷಕರಲ್ಲಿ ಬರಬೇಕು. ತಾರತಮ್ಯ ಮಾಡದೆ ನ್ಯಾಯಸಮ್ಮತ ನಿರ್ಣಯ ಕೊಡಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಮೊಟಕುಗೊಳಿಸಬಾರದು. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಆಸಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಇಒ ಆರ್.ಎಸ್. ಆದಾಪೂರ, ಬಿಆರ್‌ಸಿ ಶಿವಾಜಿ ಕಾಂಬಳೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಯು. ಶಂಬೋಜಿ, ದೈಹಿಕ ಪರಿವೀಕ್ಷಕ ಎಸ್.ಎ. ಎತ್ತಿಮನಿ, ಜಿಲ್ಲಾ ದೈಹಿಕ ಸಂಘದ ಅಧ್ಯಕ್ಷ ಎನ್. ಎಲ್. ನೀಲನಾಯಕ, ಎಚ್.ಜಿ. ತಿಪ್ಪರಡ್ಡಿ, ಎಸ್.ಎಲ್. ಹಳ್ಳೂರ, ನಕುಲ ಬೆಳ್ಳುಬ್ಬಿ, ವಿ.ಎಸ್. ಡಂಗಿ, ಪರಶು ಮಾದರ ಇತರರಿದ್ದರು.
ಇದೇ ವೇಳೆ 72 ಅಂಗವಿಕಲ ಮಕ್ಕಳಿಗೆ ತ್ರಿಚಕ್ರ ಬೈಸಿಕಲ್ ವಿತರಿಸಲಾಯಿತು.