ಮಕ್ಕಳು ಕೆಂಪೇಗೌಡರ ಆದರ್ಶ ಮೈಗೂಡಿಸಿಕೊಳ್ಳಲಿ

kolar
Published on

ಕೋಲಾರ: ಸುಂದರ ಹಾಗೂ ವಿಶ್ವಮಾನ್ಯ ನಗರ ನಿಮಾರ್ಣದ ಕಲ್ಪನೆ, ಸಮುದಾಯದ ಉನ್ನತಿಗೆ ಕೆರೆಗಳ ನಿರ್ಮಿಸಿದ ಕೆಂಪೇಗೌಡರ ಆದರ್ಶವನ್ನು ಮಕ್ಕಳು ಮೈಗೂಡಿಸಿಕೊಂಡು, ಗುರಿ ಸಾಧನೆಯ ಛಲದೊಂದಿಗೆ ಮುನ್ನುಗ್ಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣಿ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕನ್ನಡ ಸಂಸತಿ ಇಲಾಖೆ ಆಶ್ರಯದಲ್ಲಿ ಮೆಥೋಡಿಸ್ಟ್​ ಶಾಲೆಯಲ್ಲಿ ಬುಧವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಪೂರ್ವಭಾವಿಯಾಗಿ ಪ್ರೌಢಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕೆಂಪೇಗೌಡರು ನೂರಾರು ಕೆರೆಗಳನ್ನು ಕಟ್ಟುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಿದ್ದಾರೆ. ಆದರೆ ನಾವಿಂದು ಅನೇಕ ಕೆರೆಗಳನ್ನು ಕಳೆದುಕೊಂಡು ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿದ್ದೇವೆ. ಹಾಗಾಗಿ ಇಂದಿನ ಸಮಾಜ ಹಾಗೂ ವಿದ್ಯಾರ್ಥಿಗಳಿಗೆ ಕೆಂಪೇಗೌಡರ ದೂರದೃಷ್ಟಿ ಆಡಳಿತದ ಅರಿವು ಅಗತ್ಯ. ಜನರಲ್ಲಿ ಜಾತಿಭೇದ ಎಣಿಸದೇ ಬೆಂಗಳೂರಿನಲ್ಲಿ ಒಂದೊಂದು ಸಮುದಾಯಕ್ಕೂ ಒಂದೊಂದು ಪೇಟೆ ರಚಿಸಿದ ಅವರ ಹೃದಯ ವೈಶಾಲ್ಯ ಎಲ್ಲರಿಗೂ ಮಾದರಿ ಎಂದರು.

ತಹಸೀಲ್ದಾರ್​ ನಯನಾ ಮಾತನಾಡಿ, ಕೆಂಪೇಗೌಡರು ಬೆಂಗಳೂರಿನಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಕೈಗಾರಿಕೆಗಳಿಗೆ ಜಾಗ ಗುರುತಿಸಿದ್ದರು. ಪ್ರತಿಯೊಂದುಹಂತದಲ್ಲೂ ಬದುಕುವ ದಾರಿ ತೋರಿಸಿದ್ದಾರೆ ಎಂದು ತಿಳಿಸಿದರು.

ವಿಜೇತರು: ಪ್ರಬಂಧ ಸ್ಪರ್ಧೆಯಲ್ಲಿ ಹೋಳೂರು ಶಾಲೆಯ ಸಿಂಚನಾ ಪ್ರಥಮ, ಮುದುವಾಡಿ ಶಾಲೆಯ ಎಸ್​.ಭಾನುಶ್ರೀ ದ್ವೀತಿಯ, ಷಾಜಿಯಾ ತೃತೀಯ ಸ್ಥಾನ ಪಡೆದಿದ್ದು, ಕಾಮಧೇನುಹಳ್ಳಿ ಶಾಲೆಯ ಜಿನೀತಾ ಹಾಗೂ ಎನ್​ಜಿಎಚ್​ಎಸ್​ನ ಪ್ರಾರ್ಥನಾ ಸಮಾಧಾನಕರ ಬಹುಮಾನ ಪಡೆದರೆ ಆಶುಭಾಷಣ ಸ್ಪರ್ಧೆಯಲ್ಲಿ ಬೆಗ್ಲಿಹೊಸಹಳ್ಳಿ ಶಾಲೆಯ ವಿ.ಮೋನಿಕಾ ಪ್ರಥಮ, ಕಾಮಧೇನಹಳ್ಳಿ ಶಾಲೆಯ ಭಾನುಪ್ರಿಯಾ ದ್ವೀತಿಯ, ಮೇಡಿಹಾಳ ಶಾಲೆಯ ರಕ್ಷಿತಾ ತೃತೀಯ ಸ್ಥಾನ ಪಡೆದಿದ್ದು, ವೇಮಗಲ್​ನ ಶಿವಕುಮಾರ್​, ಹೋಳೂರಿನ ಎಂ.ಆರ್​.ಸುಕೃತ್​ ಸಮಾಧಾನಕರ ಬಹುಮಾನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net