ಮಕ್ಕಳು ಹೂವುಗಳಂತೆ ಬೆಳೆಯಲಿ ಬಿಡಿ.!

klr
Published on

ಕೋಲಾರ: ಮಕ್ಕಳ ಮೇಲೆ ಅತಿಯಾದ ನೀರೀಕ್ಷೆ ಇಟ್ಟುಕೊಳ್ಳುವ ಬದಲು ಅವರು ಹೂವುಗಳಂತೆ ಬೆಳೆಯಲು ಪಾಲಕರು ಬಿಡಬೇಕು. ಆಸಕ್ತದಾಯಕ ಕ್ಷೇತ್ರಗಳಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್​.ರವಿ ಸಲಹೆ ನೀಡಿದರು.

ಕೋಲಾರದ ಆದಿಮ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರದ ಚುಕ್ಕಿಮೇಳದ ಸಮಾರೋಪದಲ್ಲಿ ಮಾತನಾಡಿ, ಮಕ್ಕಳು ಪಾಲಕರಿಗೆ ಎಂದೂ ಹೊರೆಯಲ್ಲ. ಮಕ್ಕಳ ಬೆಳವಣಿಗೆಯನ್ನು ನೋಡುತ್ತಾ ಪಾಲಕರು ಬೆಳೆಯಬೇಕಿದೆ. ನಗರ ಪ್ರದೇಶಗಳ ಉದ್ಯೋಗಸ್ಥರು ಮಕ್ಕಳೊಂದಿಗೆ ಇರುವುದು ವೀಕೆಂಡ್​ನಲ್ಲಿ ಮಾತ್ರ. ಸನ್​ ಡೇ, ಮದರ್​ ಡೇ, ಫಾದರ್​ ಡೇ ತರಹ ಇರುತ್ತಾರೆ. ಅವತ್ತಿನ ದಿನ ಯಾವುದೋ ಹೋಟಲ್​ನಲ್ಲಿ ಮಾಲ್​ಗಳಲ್ಲಿ ಸಿಗುವ ತಿಂಡಿ ತಿಂದು ಅಜೀರ್ಣವಾಗಿಸಿಕೊಳ್ಳುವುದು ಆಗುತ್ತದೆ.

ಇಂತಹ ಕಾಲದಲ್ಲಿ ಆದಿಮ ಮಕ್ಕಳೊಂದಿಗೆ ಈ ಬೆಟ್ಟದ ಮೇಲೆ ಒಂದು ಪವಾಡವನ್ನೇ ಸೃಷ್ಟಿಸಿದೆ. ಪವಾಡ ಎಂದರೆ ರಾತ್ರೋರಾತ್ರಿ ಅದೇನೇನೊ ಸೃಷ್ಟಿಸುತ್ತಾರಲ್ಲಾ ಅದಲ್ಲ. ಮಕ್ಕಳು ಆದಿಮ ಪರಿಸರದಲ್ಲಿ ಸುಮಾರು 15ಕ್ಕೂ ಹೆಚ್ಚು ದಿನಗಳಲ್ಲಿ ಗಳಿಸಿರುವ ಶಕ್ತಿ ಪರೀಕ್ಷಿಸಿ ಹೇಳುತ್ತಿದ್ದೇನೆ. ಜೀವನದಲ್ಲಿ ಏನೇ ಕಳೆದುಕೊಂಡರೂ ಉತ್ಸಾಹ (ಜೋಷ್​) ಕಳೆದುಕೊಳ್ಳಬಾರದು. ಖುಷಿಯಾಗಿ, ಜೋಷಾಗಿದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಹಾಗಾಗಿ ವಿಷವ ಬಿತ್ತಿ, ಅಮೃತ ತೆಗೆಯಬಹುದುಂಟೆ? ಎಂಬ ಶೀರ್ಷಿಕೆಯಡಿ 17 ದಿನ ಸಾಂಸತಿಕ ಕಲಾಪ್ರಕಾರಗಳ ಕಲಿಕೆ ಹಾಗೂ ಪ್ರದರ್ಶನದಲ್ಲಿ 171 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದು, 171 ಮಕ್ಕಳನ್ನು ಒಂದುಕಡೆ ಕೂಡಿಸಿ, ಕಡಿಮೆ ಸಮಯದಲ್ಲಿ ವಿವಿಧ ಕಲಾಪ್ರಕಾರಗಳ ಕಲಿಕೆ ಮತ್ತು ಪ್ರದರ್ಶನಕ್ಕೆ ಸಿದ್ಧಪಡಿಸಿರುವುದೇ ಒಂದು ಪವಾಡ. ಪ್ರಕೃತಿಯ ಮಡಿಲಲ್ಲಿ ಆಟ ಪಾಟ, ಕುಣಿದು ಕುಪ್ಪಳಿಸಿ ಜೀವನದ ಏಳು, ಬೀಳುಗಳನ್ನು ಮಕ್ಕಳಿಗೆ ಆದಿಮ ಕಲಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಶಿಕ್ಷಣ ನಾಲ್ಕು ಗೋಡೆಗಳ ನಡುವೆ ಕುಳಿತು ಯಾವುದೋ ಒಂದು ಪಠ್ಯವನ್ನು ಅಭ್ಯಸಿಸುವುದಲ್ಲ, ಶಿಕ್ಷಣ ಎನ್ನುವುದು ಚಾರಿತ್ರಿಕ ನಿಮಾರ್ಣದತ್ತ, ವ್ಯಕ್ತಿತ್ವ ಕಟ್ಟಿಕೊಳ್ಳುವತ್ತ ಕೊಂಡೋಗಬೇಕು ಎಂದರು.

ಶಿಬಿರದ ನಿರ್ದೇಶಕ ಕೆ.ವಿ.ನಾಯಕ್​ (ಅಮಾಸ), ಆದಿಮ ಸಂಸ್ಥೆಯ ಡಿ.ಆರ್​.ರಾಜಪ್ಪ, ರಾಮಕೃಷ್ಣ ಬೆಳ್ತೂರ್​, ಹ.ಮಾ.ರಾಮಚಂದ್ರ, ಕೆ.ವಿ.ಕಾಳಿದಾಸ್​, ಮಾಕೊಂರ್ಡಯ್ಯ ಇದ್ದರು.

ಪ್ರತಿಭೆ ಪ್ರೋತ್ಸಾಹಿಸಿ

ಕೋಲಾರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ಮಾತನಾಡಿ, ಪರಿಸರದೊಂದಿಗೆ ಮಕ್ಕಳನ್ನು ಇಷ್ಟು ದಿನ ಇರಲು ಕಳುಹಿಸಿಕೊಟ್ಟಿರುವ ಪಾಲಕರನ್ನು ಅಭಿನಂದಿಸಲೇಬೇಕು. ಶಿಬಿರದ ಮೂಲಕ ಮಕ್ಕಳಲ್ಲಿನ ಪ್ರತಿಭೆಯನ್ನು ಆದಿಮ ಗುರುತಿಸಿದೆ. ಪಾಲಕರು ಅದಕ್ಕೆ ಪ್ರೋತ್ಸಾಹ ನೀಡಬೇಕಿದೆ. ಮಕ್ಕಳು ಉತ್ತಮ ಪ್ರಜೆಗಳಾಗಬೇಕು, ಸಮಾಜಕ್ಕೆ ಒಳಿತು ಮಾಡುವುದನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net