ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಲಿ

Scool Programme in Uppinabetageri
Published on

ಉಪ್ಪಿನಬೆಟಗೇರಿ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಮಕ್ಕಳು ಅದರ ಪ್ರಯೋಜನ ಪಡೆದು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜತೆಗೆ ಇಲ್ಲಿ ಸುಸಜ್ಜಿತ ಗ್ರಂಥಾಲಯ ತೆರೆದಿದ್ದು, ಅದಕ್ಕೆ ಬೇಕಾದ ಪುಸ್ತಕಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಉಪ್ಪಿನಬೆಟಗೇರಿ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯ ಹಿಂದುಗಡೆ ಆಟದ ಮೈದಾನಕ್ಕಾಗಿ ಸ್ಥಳಾವಕಾಶವಿದ್ದು, ಅದನ್ನು ಅಳತೆ ಮಾಡಿ ವರದಿ ನೀಡುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗುವುದು ಎಂದರು.

ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಪ್ರವೀಣ ಓಂಕಾರಿ ಮಾತನಾಡಿ, 156 ವರ್ಷ ಪೂರೈಸಿದ ನಮ್ಮ ಶಾಲೆಗೆ ಆಟದ ಮೈದಾನವಿಲ್ಲದ ಕಾರಣ ಮಕ್ಕಳು ದೈಹಿಕ ಶಿಕ್ಷಣ ಪಡೆಯುವುದು ಕಷ್ಟಕರವಾಗಿದೆ. ಶಾಲೆಯ ಹಿಂದೆ ವಿಶಾಲವಾದ ಸ್ಥಳ ಇದ್ದು, ಅದನ್ನು ಸಮತಟ್ಟು ಮಾಡಿ ಗಡಿ ಗುರುತು ಮಾಡಿಸಿಕೊಟ್ಟರೆ ಮಕ್ಕಳ ಕ್ರೀಡಾ ಚಟುವಟಿಕೆಗೆ ಬಳಸಿಕೊಳ್ಳಬಹುದು. ಶತಮಾನೋತ್ತರ ಸುವರ್ಣ ಮಹೋತ್ಸವ ಆಚರಿಸಿಕೊಂಡ ಈ ಶಾಲೆಯ ನಕ್ಷೆ ಇಲ್ಲದ್ದರಿಂದ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತಿವೆ. ಆದ್ದರಿಂದ ಕೂಡಲೇ ನಕ್ಷೆ ತಯಾರಿಸಿ ಗಡಿ ಗುರುತು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರನ್ನು ಹಾಗೂ ಗ್ರಾಮಸ್ಥರನ್ನು ಗೌರವಿಸಲಾಯಿತು.

ಎಸ್.ಡಿ.ಎಂ.ಸಿ. ಅಧ್ಯಕ್ಷ ನಿಜಗುಣಿ ಹೂಲಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ. ಅಧ್ಯಕ್ಷ ಮಂಜುನಾಥ ಮಸೂತಿ, ಕಲ್ಲಪ್ಪ ಪುಡಕಲಕಟ್ಟಿ, ಸುರೇಶಬಾಬು ತಳವಾರ, ಡಾ.ಎನ್.ಎಸ್. ಗಚ್ಚಿನಮಠ, ಚನಬಸಪ್ಪ ಮಸೂತಿ, ಕಾಶಪ್ಪ ದೊಡವಾಡ, ಫಕೀರಪ್ಪ ಮಡಿವಾಳರ, ಗುರು ತಿಗಡಿ, ಶಿವಪ್ಪ ವಿಜಾಪುರ, ಧರೆಪ್ಪ ಬೊಬ್ಬಿ, ಗ್ರಾಪಂ ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿಕ್ಷಕರಾದ ಎಫ್.ವೈ. ಮಡಿವಾಳರ, ಕೆ.ಎಸ್. ದೊಡವಾಡ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net