

ಬೆಟ್ಟದಪುರ: ಮಕ್ಕಳ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಕ್ರೀಡಾ ಚಟುವಟಿಕೆಗಳ ಪ್ರಯೋಜನಗಳು ಸಾಕಷ್ಟು ಇವೆ. ಹಾಗಾಗಿ ಮಕ್ಕಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಾರನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಕೆ.ಸಿ. ಸತೀಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಾರನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡೆಯಲ್ಲಿ ವಿಜೇತ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಯಲ್ಲಿ ಪಾಲಕರು ಕ್ರೀಡೆಯಲ್ಲಿ ಮಕ್ಕಳ ಸಾಧನೆಗಳನ್ನು ಗೌರವಿಸಿ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಅವರನ್ನು ಪ್ರೇರೇಪಿಸಬೇಕು, ಸೋಲನ್ನು ಸ್ಪರ್ಧಾತ್ಮಕ ಮನೋಭಾವದಿಂದ ಸ್ವೀಕರಿಸುವಂತೆ ಸಲಹೆ ನೀಡಬೇಕು. ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.
ತಾಲೂಕು ಮಟ್ಟಕ್ಕೆ ಆಯ್ಕೆ: ಬಾಲಕರ ವಿಭಾಗದಲ್ಲಿ ಖೋಖೋ ಹಾಗೂ ಕಬಡ್ಡಿ ದ್ವಿತೀಯ ಸ್ಥಾನ ಹಾಗೂ 600 ಮೀ. ಓಟದಲ್ಲಿ ಭವ್ಯಾ ಪ್ರಥಮ ಸ್ಥಾನ, ಉದ್ದ ಜಿಗಿತದಲ್ಲಿ ತ್ರಿಷ್ಯಾ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ಮೋನಿಕಾ ದ್ವಿತೀಯ ಸ್ಥಾನ, ತಟ್ಟೆ(ಚಕ್ರ) ಎಸೆತದಲ್ಲಿ ಭವ್ಯಾ ದ್ವಿತೀಯ ಸ್ಥಾನ, 200ಮೀ. ಓಟದ ಸ್ಪರ್ಧೆಯಲ್ಲಿ ತ್ರಿಷ್ಯಾ ಮತ್ತು ರೋಹಿತ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವೈಯಕ್ತಿಕ ಕ್ರೀಡೆಯಲ್ಲಿ ವಿಜೇತ ಮಕ್ಕಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ಎಲ್ಲ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.
ಗ್ರಾಮದ ಮುಖಂಡರಾದ ಎಚ್.ಟಿ. ಗೋವಿಂದೆಗೌಡ, ಅಣ್ಣಯ್ಯಚಾರ್, ನಾರಾಯಣಗೌಡ, ಜನಾರ್ದನ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ನೂರ್ ಉಲ್ಲಾಖಾನ್, ಶೇಖರ್, ಸತೀಶ್, ಭಾಸ್ಕರ್, ತುಂಗಶ್ರೀ, ಶಿಕ್ಷಕರಾದ ಎಂ.ವಿದ್ಯಾಶ್ರೀ, ಶಾಜೀಯಾ ಪರ್ವಿನ್, ಉಮಾಶ್ರೀ, ಚಂದ್ರಶೇಖರ್, ನಾಗರತ್ನಾ, ನಂದಿನಿ, ಜಬಿನ್ ಬೀಬಿ, ರುಕ್ಮಿಣಿ, ಸ್ವಾತಿ, ಚಂದ್ರು, ಯಶೋದಮ್ಮ, ಗ್ರಾ.ಪಂ. ಗುಮಾಸ್ತ ಕಿರಣ್ ಇತರರಿದ್ದರು.