

ತರೀಕೆರೆ: ದತ್ತಿ ಉಪನ್ಯಾಸ ಮಾಲಿಕೆಗಳು ಹೆಚ್ಚಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಲ್ಲೇನಹಳ್ಳಿ ಬಸಮ್ಮ ಪಟೇಲ್ ರಂಗಪ್ಪ, ಬೆಟ್ಟದಹಳ್ಳಿ ಸಿದ್ದಮ್ಮ ರುದ್ರಪ್ಪ, ಎಸ್.ಸತ್ಯನಾರಾಯಣ ಶ್ರೇಷ್ಠಿ ಹಾಗೂ ಪಟೇಲ್ ಪುಟ್ಟೇಗೌಡ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.
ಭಾಷಾಭಿಮಾನದ ಮೂಲಕ ಕುಟುಂಬದ ಹಿರಿಯರ ಹೆಸರಿನಲ್ಲಿ ಠೇವಣಿ ಇಟ್ಟರೆ ಕನ್ನಡ ಸಾಹಿತ್ಯ ಪರಿಷತ್‌ನಿಂದ ಪ್ರತಿ ವರ್ಷ ದತ್ತಿ ಉಪನ್ಯಾಸ ಆಯೋಜಿಸಲಾಗುವುದು. ಕಸಾಪ ನಾಡು, ನುಡಿ, ಜಲದ ಸಂರಕ್ಷಣೆ, ಕಲೆ, ಸಾಹಿತ್ಯ, ಸಂಗೀತ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಿ ನಮ್ಮ ಮಣ್ಣಿನ ಸೊಗಡು ಶ್ರೀಮಂತಗೊಳಿಸುತ್ತಿದೆ ಎಂದರು.
ಜಾನಪದ ಒಂದು ಪ್ರಾಕಾರವಾದರೂ ಸಾಹಿತ್ಯ ಪರಿಷತ್ ಜಿಲ್ಲಾ ಮಹಿಳಾ ಜಾನಪದ ಸಮ್ಮೇಳನ ಏರ್ಪಡಿಸಿದೆ. ಜಿಲ್ಲೆಯಲ್ಲಿ ಹೆಚ್ಚು ತತ್ವಪದಕಾರರು, ಗಮಕ ಸಾಹಿತ್ಯಕಾರರು ಇರುವುದರಿಂದ ತತ್ವಪದ ಹಾಗೂ ಗಮಕ ಸಾಹಿತ್ಯ ಸಮ್ಮೇಳನ ಆಯೋಜಿಸುವ ಚಿಂತನೆ ನಡೆಸಿದೆ. ಸದ್ಯದಲ್ಲೇ ಜಿಲ್ಲಾದ್ಯಂತ ಸಾಹಿತ್ಯ ಪರಿಷತ್ ಸದಸ್ಯತ್ವ ಅಭಿಯಾನ ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಜಾನಪದ ಗೀತೆ ವಿಷಯವಾಗಿ ಮಾತನಾಡಿ, ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಇಲ್ಲಿ ಕಾಣಬಹುದಾದ ಕಲೆ, ಸಾಹಿತ್ಯ, ನೃತ್ಯ, ನಾಟಕ ಪ್ರಾಕಾರಗಳು ಮೂಲ ನೆಲೆ ಉಳಿಸಿಕೊಂಡಿವೆ ಎಂದರು.
ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ಇಮ್ರಾನ್ ಅಹಮದ್ ಬೇಗ್ ಮಾತನಾಡಿ, ಮನುಷ್ಯತ್ವ ಕಲಿಸಿಕೊಟ್ಟಿದ್ದು ಮಾತ್ರವಲ್ಲ ಬದುಕು ಹಸನುಗೊಳಿಸಿಕೊಳ್ಳಲು ರೂಪುಗೊಂಡಿರುವ ಅದ್ಭುತ ಶಕ್ತಿಯೇ ಭಗವದ್ಗೀತೆ ಎಂದು ಹೇಳಿದರು.
ತಾಲೂಕು ಕಸಾಪ ಗೌರವಾಧ್ಯಕ್ಷ ಬಿ.ಎಸ್.ಭಗವಾನ್, ಪ್ರಮುಖರಾದ ರವಿ ದಳವಾಯಿ, ಮುಜೀಬ್, ಶಿಕ್ಷಕ ವಸಂತ್‌ಕುಮಾರ್ ಇತರರಿದ್ದರು.