

ವಿಜಯವಾಣಿ ಸುದ್ದಿಜಾಲ ಧಾರವಾಡ
ಈ ನಾಡು ಕಂಡ ಅಪ್ಪಟ ಸ್ವದೇಶಿ ಹೋರಾಟಗಾರ್ತಿ ಚನ್ನಮ್ಮ ಹಳ್ಳಿಕೇರಿ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಚನ್ನಮ್ಮ ಹಳ್ಳಿಕೇರಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊಸರಿತ್ತಿಯ ಸ್ವಾತಂತ್ರೃ ಹೋರಾಟಗಾರರ ಕುಟುಂಬದಲ್ಲಿ ಜನಿಸಿದ ಚನ್ನಮ್ಮ ಬಾಲ್ಯದಲ್ಲೇ ಗಾಂಧೀಜಿ ಪ್ರಭಾವಕ್ಕೆ ಒಳಗಾದವರು. ವಿನೋಬಾ ಭಾವೆಯವರ ಭೂದಾನ ಯಜ್ಞ ಚಳವಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಪೌನಾರದಲ್ಲಿ ಮಹಿಳೆಯರಿಗಾಗಿ ಆಶ್ರಮ ಪ್ರಾರಂಭಿಸಲು ಪ್ರೇರಣೆಯಾದವರು. ಬದುಕಿನುದ್ದಕ್ಕೂ ಗಾಂಧಿ ಹಾಗೂ ವಿನೋಬಾಭಾವೆ ತತ್ವಗಳನ್ನು ಪರಿಪಾಲಿಸಿದವರು. ತನಗಾಗಿ ಏನನ್ನೂ ಮಾಡಿಕೊಳ್ಳದ ಅಪ್ಪಟ ಬ್ರಹ್ಮಚರ್ಯ ಜೀವನ ಸಾಗಿಸಿದ ಮಾದರಿಯ ಮಹಿಳೆ ಎಂದರು.
ಶಂಕರ ಹಲಗತ್ತಿ ಮಾತನಾಡಿ, ಚನ್ನಮ್ಮ ಹಳ್ಳಿಕೇರಿ ಅನ್ಯಾಯವನ್ನು ಎಂದೂ ಸಹಿಸದವರು. ನೂರಾರು ಅಸಹಾಯಕ ಮಹಿಳೆಯರಿಗೆ ಜೀವನೊಲ್ಲಾಸ ತುಂಬಿ ಅವರು ನೆಮ್ಮದಿಯಾಗುವಂತೆ ಸಹಾಯ ಮಾಡಿದ ಮಹಾತಾಯಿ. ಕೊನೆ ಉಸಿರಿರುವವರೆಗೂ ಯುವಕರ ಮೇಲೆ ಮತ್ತು ಮಹಿಳೆಯರ ಮೇಲೆ ಭರವಸೆ ಹೊಂದಿದ್ದರು. ಮುಧೋಳದ ಆಶ್ರಮ ಪ್ರಾರಂಭಿಸಿ ಸಹಜ ಬದುಕಿನ ಬಗ್ಗೆ ಮಾದರಿ ಬದುಕು ಕಟ್ಟಿಕೊಟ್ಟು ಹೋದರು. ಅವರ ಆದರ್ಶ ನಮಗೆ ದಾರೀದಿಪವಾಗಲಿ ಎಂದರು.
ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಚನ್ನಮ್ಮ ತಾಯಿ ಸ್ವದೇಶಿ ಮಂತ್ರವು ಗಾಂಧೀಜಿ, ವಿನೊಬಾಭಾವೆ ಅವರಿಂದ ಚೆನ್ನಮ್ಮನವರು ರಿಲೇ ಆಟದಂತೆ ಒಬ್ಬರಿಂದ ಒಬ್ಬರಿಗೆ ಸಾಗಿಸುತ್ತಾ ಬಂದು ಈಗ ನಮ್ಮ ಕೈಗೆ ಸ್ವದೇಶಿ ರಿಲೆ ಕಟ್ಟಿಗೆ ಕೊಟ್ಟು ಹೋಗಿದ್ದಾರೆ. ಅದನ್ನು ಮುಂದೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಶಿವುಕುಮಾರ ಕಂಬಾರ, ಶಕುಂತಲಾ ಮನ್ನಂಗಿ, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿದರು. ಜಿನದತ್ತ ಹಡಗಲಿ, ಶಂಕರ ಕುಂಬಿ, ಮಹಂತೇಶ ನೆರೆಗಲ್ಲ, ಇತರರು ಇದ್ದರು.