

ಹುಬ್ಬಳ್ಳಿ : ಮಹದಾಯಿ ನ್ಯಾಯಧಿಕರಣ ಮತ್ತು ಟೆಂಡರ್ ಪ್ರಕ್ರಿಯೆ ಬಗ್ಗೆ ಸುಳ್ಳು ಹೇಳಿಕೆ ನೀಡುವುದನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಲ್ಲಿಸಬೇಕು ಎಂದು ಕಳಸಾ-ಬಂಡೂರಿ ಹೋರಾಟಗಾರ ವೀರೇಶ ಸೊಬರದಮಠ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರ ನ್ಯಾಯಾಧೀಕರಣ ರಚನೆ ಮಾಡಿತ್ತು. ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಡಿಪಿಆರ್ ರೂಪಿಸಿ, ಕೇಂದ್ರದ ಸಂಬಂಧಿಸಿದ ಇಲಾಖೆಗೆ ಪರವಾನಿಗೆ ಕೇಳಲಾಗಿತ್ತು.
ಆದರೆ, ತಮ್ಮನ್ನು ಭೇಟಿಯಾದಾಗ ಕೆಲವೊಬ್ಬರು ಅಡ್ಡಿಮಾಡುತ್ತಿದ್ದಾರೆ ಎಂಬುದನ್ನು ಸ್ವತಃ ಬೊಮ್ಮಾಯಿ ಅವರು ಹೇಳಿದ್ದಾರೆ. ಇದೀಗ ರಾಜಕೀಯ ಕಾರಣಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ನಿಮ್ಮ ರಾಜಕೀಯಕ್ಕಾಗಿ ರೈತ ಹೋರಾಟಗಾರರನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಸತ್ಯ ಹೇಳಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾನೂನುಬಾಹಿರವಾಗಿ ಟೆಂಡರ್ ಕರೆಯಲಾಗಿತ್ತು. ಈ ಹಿಂದೆ ಮಹದಾಯಿಗಾಗಿ ಹೋರಾಟ ಮಾಡಿದ್ದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಸವರಾಜ ಬೊಮ್ಮಾಯಿ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯ ಸರ್ಕಾರ ಸರಿಯಾದ ದಾಖಲೆ ಸಲ್ಲಿಸಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಕಳೆದ ಜ. 30ರಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್, ಡಾ. ಕೌಶಿಕ್ ಅವರ ಸಭೆ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಮಾಹಿತಿ ನೀಡಿದೆ. ಮಹದಾಯಿ ವ್ಯಾಪ್ತಿಯ ನಾಲ್ವರು ಸಂಸದರಲ್ಲಿ ಪ್ರಲ್ಹಾದ ಜೋಶಿ ಅವರು ಪ್ರಭಾವಿ ಸಚಿವರಾಗಿದ್ದಾರೆ. ಮಹದಾಯಿ ಯೋಜನೆಗೆ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳುವುದರೊಳಗೆ ಅನುಮತಿ ಕೊಡಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಪ್ರಲ್ಹಾದ ಜೋಶಿ ಅವರು ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸೂಕ್ತ ಸಹಕಾರ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸರಳವಾಗಲಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸೂಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದದರು.
ರೈತ ಹೋರಾಟಗಾರರಾದ ಗುರುಶಾಂತಪ್ಪ ಕಾರಿ, ಮಲ್ಲಣ್ಣ ಆಲೇಗಾರ, ಗುರು ರಾಯನಗೌಡ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.