ಬಿಜೆಪಿ ಸಂಸದ ರಿಪೋರ್ಟ್​ ಕಾರ್ಡ್​ ನೀಡಲಿ:ಕಾಂಗ್ರೆಸ್​ ಶಾಸಕ ಪ್ರದಿಪ್​ ಈಶ್ವರ್​ ಸವಾಲು

pradeep
Published on

ಬೆಂಗಳೂರು: ನಾನು ಶಾಸಕನಾಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಜನರ ಸಮಸ್ಯೆಗಳನ್ನು ಬಗೆಹರಿಸಿರುವ ಬಗ್ಗೆ ರಿಪೋರ್ಟ್​ ಕಾರ್ಡ್​ ಅನ್ನು ರಾಜ್ಯ ಬಿಜೆಪಿ ಕಚೇರಿಗೆ ಕಳುಹಿಸುತ್ತೇನೆ. ಮುಂದಿನ 6 ತಿಂಗಳೊಳಗೆ ನಿಮ್ಮ ಸಂಸದರು ಮಾಡಿರುವ ಕೆಲಸದ ರಿಪೋರ್ಟ್​ ಕಾರ್ಡ್​ ನೀಡಬೇಕು. ಇಲ್ಲದಿದ್ದರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆ ಮುಂಭಾಗ ಮೌನ ಪ್ರತಿಭಟನೆ ಮಾಡಲಾಗುವುದು ಎಂದು ಶಾಸಕ ಪ್ರದಿಪ್​ ಈಶ್ವರ್​ ಎಚ್ಚರಿಕೆ ನೀಡಿದ್ದಾರೆ.

ಕಳೆದ ವಾರ ಬಿಜೆಪಿಯವರು "ನಾನು ಆಕಸ್ಮಿಕ ಶಾಸಕ' ಅಂತ "ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದರು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಸುಲಭವಾಗಿ ಗೆದ್ದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಅನಾಥ ಹುಡುಗ ಹೇಗೆ ಮುಂದೆ ಬರಬಹುದು ಎಂಬುದನ್ನೂ ತೋರಿಸಿದ್ದೇನೆ. ಸಾಮಾನ್ಯ ಹುಡುಗನಿಗೆ ಅವಕಾಶ ಸಿಕ್ಕಿದರೆ ಪ್ರದಿಪ್​ ಈಶ್ವರ್​ನಂತೆ ಆತ್ಮವಿಶ್ವಾಸದ ಶಾಸಕನಾಗುತ್ತಾನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ 30 ಪಂಚಾಯಿತಿಗಳು, 366 ಹಳ್ಳಿಗಳಿವೆ. ನನ್ನ ಆಡಳಿತದಲ್ಲಿ 2 ತಾಲೂಕುಗಳಿವೆ. 23 ಪಂಚಾಯಿತಿ, 303 ಹಳ್ಳಿಗಳಿವೆ. ಮಂಚನಹಳ್ಳಿ ತಾಲೂಕಿನಲ್ಲಿ 7 ಪಂಚಾಯಿತಿ, 63 ಹಳ್ಳಿಗಳಿವೆ. 366 ಹಳ್ಳಿಗಳ ಪೈಕಿ 133 ಹಳ್ಳಿಗಳಿಗೆ ಈವರೆಗೆ ಭೇಟಿ ಕೊಟ್ಟಿದ್ದೇನೆ. ಕ್ಷೇತ್ರದಲ್ಲಿ 60,180 ಮನೆಗಳಿವೆ. ಗೆದ್ದ 2 ತಿಂಗಳಲ್ಲಿ ಕ್ಷೇತ್ರದ ಪ್ರತಿ ಮನೆ ಸಮಸ್ಯೆಗಳ ಪರಿಹಾರಕ್ಕಾಗಿ "ಡಿಜಿಟಲ್​ ಚಿಕ್ಕಬಳ್ಳಾಪುರ' ಯೋಜನೆ ಆರಂಭಿಸಿ ಕ್ಯೂಆರ್​ ಕೋಡ್​ ನೀಡಿದ್ದೇನೆ. ಒಳಚರಂಡಿ, ವಿದ್ಯುತ್​, ನೀರು, ಪಿಂಚಣಿ, ರಸ್ತೆ ಸೇರಿ ಇತರೆ ಮೂಲಸೌಕರ್ಯ ಬಗ್ಗೆ ಜನರು ಆನ್​ಲೈನ್​ನಲ್ಲಿ ದೂರು ಸಲ್ಲಿಸಿದರೆ 48 ಗಂಟೆಯೊಳಗೆ ಬಗೆಹರಿಸಲಾಗುತ್ತಿದೆ. ಆನ್​ಲೈನ್​ನಲ್ಲಿ ಈವರೆಗೆ 5 ಸಾವಿರಕ್ಕೂ ಅಧಿಕ ಸಮಸ್ಯೆಗಳಿಗೆ ಪರಿಹಾರ ಕೊಡಿಸಿದ್ದೇನೆ. ಇದಕ್ಕಾಗಿ ಪ್ರತಿ ನಿತ್ಯ 2 ಗಂಟೆ ಸಮಯ ಮೀಸಲಿಟ್ಟಿದ್ದೇನೆ ಎಂದು ಮಾಹಿತಿ ನೀಡಿದರು.

ನಾನು ಅಂಬೇಡ್ಕರ್​ ಭಕ್ತ: ನಾನು ಡಾ.ಬಿ.ಆರ್​. ಅಂಬೇಡ್ಕರ್​ ಅವರ ಭಕ್ತ. ಅವರು ರಚಿಸಿದ ಸಂವಿಧಾನದಿಂದಲೇ ಶಾಸಕನಾಗಿದ್ದೇನೆ. ನಾನು ದಲಿತರ ಧ್ವನಿ. ಹಲವು ವರ್ಷಗಳಿಂದ ನಮ್ಮ ಊರು ಪೆರೆಸಂದ್ರದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ಜನರಿಗೆ ಮಸಣ ಇರಲಿಲ್ಲ. ಇದಕ್ಕಾಗಿ ಒಂದೂವರೆ ಎಕರೆ ಜಾಗ ನೀಡುವ ಮೂಲಕ ಜಟಿಲ ಸಮಸ್ಯೆ ಬಗೆಹರಿಸಿದ್ದೇನೆ ಎಂದು ಪ್ರದಿಪ್​ ಈಶ್ವರ್​ ತಿಳಿಸಿದರು. ಕ್ಷೇತ್ರದಲ್ಲಿ ಜಾಗದ ಒತ್ತುವರಿ ತೆರವಿಗೆ ಪರಿಣಾಮಕಾರಿಯಾಗಿ ಕ್ರಮ ಕೈಗೊಂಡಿದ್ದೇನೆ. ನಾನು ಮಾತಗಾರನೂ ಹೌದು, ಕೆಲಸಗಾರನೂ ಹೌದು. ನನ್ನ ಬಗ್ಗೆ ವಿಮರ್ಶೆ ಮಾಡಿದರೆ ತಲೆಕೆಡಿಸಿಕೊಳ್ಳವುದಿಲ್ಲ ಎಂದು ಪ್ರದಿಪ್​ ಈಶ್ವರ್​ "ಕಮಲ' ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಾಂಶಗಳು

* 2 ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯದ ಬಗ್ಗೆ ದಾಖಲೆಸಹಿತ ರಿಪೋರ್ಟ್​ ಕಾರ್ಡ್​ ಸಲ್ಲಿಕೆ.

* "ಡಿಜಿಟಲ್​ ಚಿಕ್ಕಬಳ್ಳಾಪುರ' ಯೋಜನೆಯಡಿ ಮೂಲಸೌಕರ್ಯ ಕೊರತೆ ನಿವಾರಣೆಗೆ 40 ಮಂದಿ ನೇಮಕ.

* ಸಾಮಾನ್ಯ ಜನರಿಗೆ ಶಾಸಕರನ್ನು ಸುಲಭವಾಗಿ ಭೇಟಿ ಮಾಡುವ ನಿಟ್ಟಿನಲ್ಲಿ " ನಮ್ಮ ಊರಿಗೆ ನಮ್ಮ ಶಾಸಕರು' ಯೋಜನೆ ಆರಂಭ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮೆಚ್ಚುಗೆ .

* ಕಂದಾಯ, ಪೊಲೀಸ್​ ಸೇರಿ 30 ಇಲಾಖೆಗಳ ಅಧಿಕಾರಿಗಳನ್ನು ಹಳ್ಳಿಗಳಿಗೆ ತೆರಳಿ ಸರ್ವೇ, ಪಿಂಚಣಿ, ಮಸಣ ಜಾಗದ ಒತ್ತುವರಿ ತೆರವು,ರಸ್ತೆ ಸೇರಿ ಇತರೆ ಸಮಸ್ಯೆಗಳಿಗೆ ಪರಿಹಾರ.

* "ನಮ್ಮ ಊರಿಗೆ ನಮ್ಮ ಶಾಸಕರು' ಯೋಜನೆಯಡಿ ಈವರೆಗೆ 130 ಹಳ್ಳಿಗಳಿಗೆ ಭೇಟಿ. ಮುಂದಿನ ಒಂದು ವರ್ಷದಲ್ಲಿ ಉಳಿದ ಹಳ್ಳಿಗಳಿಗೆ ಭೇಟಿ ಉದ್ದೇಶ.

* ನಗರ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಲು "ನಮಸ್ತೆ ಚಿಕ್ಕಬಳ್ಳಾಪುರ' ಯೋಜನೆ.

* ಕ್ಷೇತ್ರದ ಬಡ, ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಸ್ವಂತ ಹಣದಿಂದ "ಅಮ್ಮ ಆಂಬುಲೆನ್ಸ್​' ಯೋಜನೆ ಆರಂಭ. 10 ಆಂಬುಲೆನ್ಸ್​ ಖರೀದಿಸಿ 20 ಚಾಲಕರನ್ನು ನೇಮಕ ಮಾಡಲಾಗಿದೆ. ಈವರೆಗೆ 5 ಸಾವಿರ ಅಧಿಕ ರೋಗಿಗಳನ್ನು ಆಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.

* ವಿವಿಧ ಪರೀೆ ಮೂಲಕ ಅಂಕ ಗಳಿಸಲು ಆದ್ಯತೆ ನೀಡಿದ ಪರಿಣಾಮ ಸರ್ಕಾರಿ, ಅನುದಾನಿತ ಶಾಲೆಗಳ ಎಸ್ಸೆಸ್ಸೆಲ್ಸಿ ಲಿತಾಂಶ ಹೆಚ್ಚಳ.

* 600 ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ, ನೀಟ್​ ತರಬೇತಿ.

* ಪ್ರತಿ ಭಾನುವಾರ ಉಚಿತವಾಗಿ ಆರೋಗ್ಯ ಶಿಬಿರ .

* 2027 ಡಿಸೆಂಬರ್​ದೊಳಗೆ ಚಿಕ್ಕಬಳ್ಳಾಪುರ ೇತ್ರಕ್ಕೆ ಎತ್ತಿನಹೊಳೆ ನೀರು.

* ನಾನು ಗೆದ್ದ ತಣ ಫ್ಲೆಕ್ಸ್​ ಬ್ಯಾನ್​.

* ಸರ್ಕಾರಿ ಕಾಲೇಜಿನಲ್ಲಿ ಆವರಣದಲ್ಲಿ ಖಾಸಗಿ ಕಾರ್ಯಕ್ರಮ ಮಾಡದಂತೆ ಆದೇಶ.

* ಸ್ವಂತ ಹಣದಿಂದ ಪ್ರತಿ ವರ್ಷ ಸಾವಿರ ರೂ.ನಂತೆ 7 ಸಾವಿರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net