ಮೈಸೂರು: ಮಂಡ್ಯದ ಕೆರಗೋಡು ಹನುಮ ಧ್ವಜ ವಿವಾದ ಕುರಿತಂತೆ ಹೆಚ್ಚು ಕಾಳಜಿ ವಹಿಸುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯವರು ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರಿಗೆ ಪರಿಹಾರ ಕೊಡಿಸಲಿ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎಸ್.ರಾಜೇಶ್ ಆಗ್ರಹಿಸಿದರು.
ರಾಜ್ಯ ಸರ್ಕಾರಕ್ಕೆ ಜಿಎಸ್‌ಟಿ ಕುರಿತಂತೆ ಸಾಕಷ್ಟು ಪ್ರಮಾಣದಲ್ಲಿ ಹಣ ಬಂದಿಲ್ಲ. ಈ ನಿಟ್ಟಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಹೋರಾಟ ನಡೆಸಲಿ. ಚಿಕ್ಕಮಗಳೂರು, ಬಾಬಾಬುಡನ್‌ಗಿರಿಯಂತೆ ಮಂಡ್ಯವನ್ನೂ ಪರಿವರ್ತಿಸಲು ಎಚ್.ಡಿ.ಕುಮಾರಸ್ವಾಮಿ ಅವರು ಸಿ.ಟಿ.ರವಿ ಅವರೊಡನೆ ಕೈಜೋಡಿಸುತ್ತಿರುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಂಡ್ಯದಲ್ಲಿ ಹಳೇ ಕಾಂಗ್ರೆಸ್‌ನಂತೆ ಈಗಿನ ಕಾಂಗ್ರೆಸ್ ಇಲ್ಲ ಎಂಬ ಟೀಕೆ ಖಂಡನಾರ್ಹ. ಜಿಲ್ಲೆಯಲ್ಲಿದ್ದ ಜೆಡಿಎಸ್ ಮುಖಂಡರಿಗೆ ಸಮನಾದವರು ಈಗ ಪಕ್ಷದಲ್ಲಿ ಇಲ್ಲ. ಜೆಡಿಎಸ್ ಈಗ ಕೇವಲ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿದೆ ಎಂದು ಟೀಕಿಸಿದರು.
ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಜಾತಿ ಸಂಘರ್ಷ ಉಂಟು ಮಾಡಲು ಬಿಜೆಪಿ ಪಿತೂರಿ ನಡೆಸುತ್ತಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮಕೈಗೊಂಡು ಗ್ರಾಮದಲ್ಲಿ ಸಾಮರಸ್ಯ ಮೂಡಿಸಬೇಕು ಎಂದು ಕೋರಿದರು.
ಮುಖಂಡರಾದ ರವಿ, ಎಸ್.ಎ. ರಹೀಂ, ಸಿದ್ದರಾಜು ಇದ್ದರು.