

ಮೈಸೂರು; ಮೈಸೂರು ಧರ್ಮಪ್ರಾಂತದ ಮುಖ್ಯಸ್ಥ ಬಿಷಪ್ ಡಾ.ಕೆ.ಆಂಟನಿ ವಿಲಿಯಂ ಅವರನ್ನು ಕೂಡಲೇ ಮೈಸೂರಿಗೆ ವಾಪಸ್ ಕರೆತಂದು ಅವರ ಜೀವಕ್ಕೆ ಭದ್ರತೆ ಒದಗಿಸಬೇಕು ಎಂದು ಕ್ರೈಸ್ತ ಸಮಾಜದ ನಾಗರಿಕರು ಆಗ್ರಹಿಸಿದರು.
ಬನ್ನಿಮಂಟಪದ ಬಿಷಪ್ ನಿವಾಸ ಸನ್ಮಾರ್ಗದಲ್ಲಿ ಪ್ರತಿಭಟನಾ ಸಭೆ ನಡೆಸಿದ ಮುಖಂಡರು, ಪ್ರಭಾರ ಆಡಳಿತಾಧಿಕಾರಿ ಫಾ.ಬರ್ನಾಡ್ ಮೊರೆಸ್ ಅವರಿಗೆ ಮನವಿ ಸಲ್ಲಿಸಿದರು.
ರಜೆ ಮೇಲೆ ಕಳುಹಿಸಿರುವ ಬಿಷಪ್ ಡಾ.ಕೆ.ಎ. ವಿಲಿಯಂ ಅವರನ್ನು ತಕ್ಷಣವೇ ಮೈಸೂರು ಧರ್ಮಪ್ರಾಂತಕ್ಕೆ ಕರೆತರಬೇಕು. ಆರ್ಚ್ ಬಿಷಪ್ ಲಿಯೋ ಕರ್ನೆಲಿಯೋ ವಿರುದ್ಧ ಕ್ರಮಕ್ಕೆ ಬರೆಯಬೇಕು. ಹತ್ಯೆಗೆ ಸಂಚು ರೂಪಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಜ.6ರಂದು ಮೈಸೂರು ಧರ್ಮಪ್ರಾಂತ್ಯದ ವಿಶೇಷವಾಗಿ ಫಾ. ಜ್ಞಾನಪ್ರಕಾಶ್, ಆರ್ಚ್‌ಬಿಷಪ್ ಲಿಯೊ ಕರ್ನೆಲಿಯೊ ಮತ್ತು ದೂರುದಾರ ಮಹಿಳೆಯೊಂದಿಗೆ ನಡೆಸಿದ ಮೊಬೈಲ್ ಸಂಭಾಷಣೆ ವೈರಲ್ ಆಗಿತ್ತು. ಇದರಲ್ಲಿ 2021ರಲ್ಲಿ ಮೈಸೂರು ಬಿಷಪ್ ಡಾ.ಕೆ.ಆಂಟೋನಿ ವಿಲಿಯಂ ವಿರುದ್ಧ ಕೇಳಿಬಂದಿದ್ದ ಆರೋಪ ಸಂಬಂಧ ತನಿಖೆ ನಡೆಸಿದ ವರದಿಯ ವಿವರಗಳು ಉಲ್ಲೇಖಗೊಂಡಿವೆ. ಇದರಿಂದ ಧರ್ಮಪ್ರಾಂತ್ಯದ ನಂಬಿಕೆಗಳನ್ನು ಕೆಲ ಪಾದ್ರಿಗಳು ಗಾಳಿಗೆ ತೂರಿದಂತಾಗಿದೆ ಎಂದು ಕಿಡಿಕಾರಿದರು.
6-7 ಸಂಚುಕೋರರು ಹಾಗೂ ಆಡಿಯೋದಲ್ಲಿ ಕೇಳಿಬಂದಿರುವ ಪಾದ್ರಿಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮವಾಗಬೇಕು. ಬಿಷಪ್ ಡಾ.ಕೆ.ಆಂಟನಿ ವಿಲಿಯಂ ಅವರ ಜೀವದ ಬಗ್ಗೆ ಗಂಭೀರ ಕಾಳಜಿ ವಹಿಸಬೇಕಿದೆ ಎಂದು ಆಗ್ರಹಿಸಿದರು.
ಆಂಟನಿ ವಿಲಿಯಂ ವಿರುದ್ಧ ಕೆಲವು ಪಾದ್ರಿಗಳು ನಡೆಸಿದ ಸಂಚು, ಚರ್ಚ್‌ನ ಇತ್ತೀಚಿನ ಬೆಳವಣಿಗೆಗಳಿಂದ ತಮ್ಮ ನಂಬಿಕೆ ಛಿದ್ರಗೊಂಡಿದೆ. ಆಂಟನಿ ವಿಲಿಯಂ ಅವರ ಜೀವಕ್ಕೆ ಅಪಾಯ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೇಡಿಕೆ ಈಡೇರಿಸದಿದ್ದರೆ ಮೈಸೂರು ಧರ್ಮಪ್ರಾಂತ್ಯದ ನಿಷ್ಠಾವಂತರು ಮತ್ತು ಎಲ್ಲ ಅರ್ಚಕರು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪ್ರಭಾರ ಆಡಳಿತಾಧಿಕಾರಿ ಫಾ.ಬರ್ನಾಡ್ ಮೊರೆಸ್ ಅವರು, ಈ ಮನವಿಯನ್ನು ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸಲಾಗುವುದು. ಆಡಿಯೋ ಸಂಭಾಷಣೆ ಕೇಳಿದೆ. ಅದರಲ್ಲಿ ಯಾವುದು ಸರಿ, ಯಾವುದು ತಪ್ಪು, ಯಾರು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಸತ್ಯಕ್ಕೆ ಜಯ ದೊರೆಯಲಿದೆ ಎಂದರು.
ಧರ್ಮಪ್ರಾಂತದ ಒಳ್ಳೆಯ ಕೆಲಸ, ಹೆಸರು ಕಾಪಾಡಬೇಕು. ಯಾರಿಗೂ ಹೆಸರು ಹಾಳು ಮಾಡುವ ಹಕ್ಕಿಲ್ಲ ಎಂದು ತಿಳಿಸಿದರು.
ಫಾದರ್‌ಗಳಾದ ಜಾನ್ ಸಿಕ್ವೇರಾ, ವಿನ್ಸಂಟ್, ಡೇವಿಡ್, ಮೊದಲಿಯಾ ಮುತ್ತು, ಇಗ್ನಾಸಿ ಮುತ್ತು, ಬರ್ನಾಡ್ ಪ್ರಕಾಶ್, ಐಸ್ಯಾಕ್ ಪ್ರವೀಣ್‌ಕುಮಾರ್, ವಿಜಯಕುಮಾರ್, ಸಂಜಯ್, ಜಾನ್ ಸೆರಾ, ಮ್ಯಾಥ್ಯೂ ಬೆಂಜಮಿನ್ ಸುರೇಶ್ ಇತರರು ಇದ್ದರು.