ಯುವಜನತೆಗೆ ಭಗತ್ ಸಿಂಗ್ ಪ್ರೇರಣೆಯಾಗಲಿ; ಶರಣಪ್ಪ ಉದ್ಬಾಳ

BHAGATSINGH JAYANTI AIDYO
ವಿಜಯಪುರ ನಗರದ ವಿಜ್ಡಮ್ ಕೆರಿಯರ್ ಅಕಾಡೆಮಿಯಲ್ಲಿ ಎಐಡಿವೈಒ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ 118ನೇ ಜನ್ಮ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ ಮಾತನಾಡಿದರು. ಸಿದ್ದು ಗುರನಾಳ, ಸಿದ್ರಾಮ ಹಿರೇಮಠ್, ಅಶೋಕ ದೇಸಾಯಿ ಮತ್ತಿತರರಿದ್ದಾರೆ.
Published on

ವಿಜಯಪುರ: ಭಗತ್ ಸಿಂಗ್ ಕೇವಲ ಸ್ವಾತಂತ್ರ್ಯದ ಕನಸು ಕಾಣಲಿಲ್ಲ, ಬ್ರಿಟಿಷರ ನಂತರ ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನತೆಯಿಂದ ಕಾಣುವ ಸಮಾಜದ ಕನಸು ಕಂಡರು ಎಂದು ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ ಹೇಳಿದರು.

ನಗರದ ಎಸ್‌ಬಿ ವಿಜ್ಡಮ್ ಕೆರಿಯರ್ ಅಕಾಡೆಮಿಯಲ್ಲಿ ಎಐಡಿವೈಒ ಜಿಲ್ಲಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ 118ನೇ ಜನ್ಮ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಗಾಂಧೀಜಿ ಸಂಧಾನಪರ ಪಂಥದ ನಾಯಕರಾದರೆ, ಭಗತ್ ಸಿಂಗ್, ನೇತಾಜಿ ಅವರು ಸಂಧಾನರಹಿತ ಪಂಥದ ಅಗ್ರಗಣ್ಯ ನಾಯಕರು. ಸಂಧಾನಪರ ಪಂಥದವರು ಕೆಲವು ಸವಲತ್ತುಗಳಿಗಾಗಿ ಬ್ರಿಟಿಷ್ ಸರ್ಕಾರಕ್ಕೆ ಮನವಿ ಕೊಡುವುದಕ್ಕೆ ಸೀಮಿತವಾಗಿದ್ದರು. ಆದರೆ ಸಂಧಾನಾತೀತ ಪಂಥವು ಬ್ರಿಟಿಷರು ದೇಶ ಬಿಟ್ಟು ತೊಲಗಬೇಕು. ನಂತರ ದೇಶದಲ್ಲಿರುವ ಜಾತಿ-ಮತಗಳ ಅಸಮಾನತೆ ಇಲ್ಲದ, ದೇಶದ ಬೆನ್ನೆಲುಬಾದ ರೈತರ ಸಂಕಷ್ಟಗಳನ್ನು ದೂರ ಮಾಡುವ, ಮಹಿಳೆಗೆ ಸಮಾನತೆ ಹಾಗೂ ಭದ್ರತೆ ಖಾತ್ರಿ ಪಡಿಸುವ, ಎಲ್ಲರಿಗೂ ಉಚಿತ ಶಿಕ್ಷಣ, ಉದ್ಯೋಗ ನೀಡುವ ಸಮಾಜ ನಿರ್ಮಾಣದ ಕನಸು ಕಂಡಿದ್ದರು.

ಆದರೆ, ಆ ಕನಸು ಇಂದಿನ ನಮ್ಮ ಭ್ರಷ್ಟ ಆಳ್ವಿಕರು ನುಚ್ಚುನೂರು ಮಾಡಿದ್ದಾರೆ. ಭಗತ್ ಸಿಂಗ್ ಅವರ ಉತ್ತರಾಧಿಕಾರಿಗಳಾಗಿ ನಾವು ಸಮ ಸಮಾಜಕ್ಕಾಗಿ ಎಲ್ಲ ಯುವಜನರನ್ನು ಸಂಘಟಿಸಿ ಹೋರಾಟ ಬೆಳೆಸಬೇಕು ಎಂದರು.

ಎಸ್.ಬಿ. ವಿಜ್ಡ್‌ಮ್‌ನ ಉಪನ್ಯಾಸಕ ಸಿದ್ದು ಗುರನಾಳ ಮಾತನಾಡಿ, ಸೈಮನ್ ಗೋಬ್ಯಾಕ್ ಹೋರಾಟದಲ್ಲಿ ಲಾಲಾ ಲಜಪತರಾಯ ಅವರನ್ನು ಲಾಠಿಚಾರ್ಜ್ ಮಾಡಿ ಸಾಯಿಸಿದ ಬ್ರಿಟಿಷ್ ಅಧಿಕಾರಿಯನ್ನು ಸಾಯಿಸುವ ಧೈರ್ಯ ಮಾಡಿದ್ದು ಭಗತ್‌ಸಿಂಗ್ ಹಾಗೂ ಅವರ ಸ್ನೇಹಿತರು. ಟ್ರೆಡ್ ಡಿಸ್ಪೂಟ್ ಬಿಲ್ ವಿರೋಧಿಸಿ ಸಂಸತ್ತಿನಲ್ಲಿ ಬಾಂಬ್ ಎಸೆದು ಕ್ರಾಂತಿ ಚಿರಾವುವಾಗಲಿ (ಇಂಕ್ವಿಲಾಬ್ ಜಿಂದಾಬಾದ್) ಘೋಷಣೆ ಕೂಗುತ್ತಾ ಬಂಧನಕ್ಕೊಳಗಾದ ಮಹಾನ್ ಕ್ರಾಂತಿಕಾರಿ. ಗಲ್ಲು ಶಿಕ್ಷೆಗೆ ರಿಯಾಯಿತಿ ಕೋರಿ ಅವರ ತಂದೆ ಕ್ಷಮಾಪಣೆ ಪತ್ರ ಬರೆದಾಗ, ಅದಕ್ಕಾಗಿ ಭಗತ್‌ಸಿಂಗ್ ಅವರ ತಂದೆಗೆ ನೀವು ಬ್ರಿಟಿಷರಿಗೆ ಕ್ಷಮೆ ಕೇಳಿ ನನ್ನ ಹೋರಾಟಕ್ಕೆ ದ್ರೋಹ ಬಗೆದಿರಿ ಎಂದು ಹೇಳುತ್ತಾರೆ. ಅಂತಹ ತಲೆಭಾಗದ ಕ್ರಾಂತಿಕಾರಿ ಶಹೀದ್ ಭಗತ್‌ಸಿಂಗ್ ಇಂದಿನ ಯುವಕರಿಗೆ ಆದರ್ಶವಾಗಬೇಕು ಎಂದರು.

ಎಸ್. ಬಿ. ವಿಜ್ಡ್‌ಮ್‌ನ ವ್ಯವಸ್ಥಾಪಕರಾದ ಪ್ರಭುಗೌಡ ರೆಡ್ಡಿಯವರು ಮಾತನಾಡಿ, ದೇಶದ ಯುವಕರ ಕಣ್ಮಣಿಯಾದ ಮಹಾನ್ ಕ್ರಾಂತಿಕಾರಿ ಭಗತ್‌ಸಿಂಗ್. ಅವರು ಇಡೀ ದೇಶದ ಹಿತಕ್ಕಾಗಿ ಪ್ರಾಣಾರ್ಪಣೆ ಮಾಡಿದರು ಎಂದು ಹೇಳಿದರು.

ಆಧ್ಯಕ್ಷತೆ ವಹಿಸಿದ್ದ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ್ ಮಾತನಾಡಿ, ಈ ದೇಶದಲ್ಲಿ ಮಾನವನಿಂದ ಮಾನವನ ಶೋಷಣೆ ಕೊನೆಗೊಂಡು ಎಲ್ಲರೂ ಶಿಕ್ಷಣ ಉದ್ಯೋಗ ಭದ್ರತೆ ಪಡೆಯುವಂತಾಗಲಿ ಎಂಬ ಕನಸನ್ನು ಭಗತ್ ಸಿಂಗ್ ಕಂಡರು. ಅಂತ ಒಂದು ಸಮಾಜವಾದಿ ಭಾರತದ ಕನಸನ್ನು ನನಸು ಮಾಡುವ ಜವಾಬ್ದಾರಿ ಇಂದು ನಮ್ಮ ಮೇಲಿದೆ ಎಂದರು.

ಉಪಾಧ್ಯಕ್ಷ ಅಶೋಕ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ್ ಕೊಂಡಗೂಳಿ, ಕಾಂತು ನಾಯಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net