

ಪಿರಿಯಾಪಟ್ಟಣ: ಮಾನವನ ಸ್ವಾರ್ಥಕ್ಕಾಗಿ ಪರಿಸರ ನಾಶವಾಗುತ್ತಿರುವುದು ಆತಂಕಕಾರಿ ವಿಷಯ ಎಂದು ಪಟ್ಟಣ ನ್ಯಾಯಾಲಯದ ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ರಾಜು ಅಭಿಪ್ರಾಯಪಟ್ಟರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ನ್ಯಾಯಾಧೀಶರ ವಸತಿಗೃಹದ ಎದುರುಗಿನ ಉದ್ಯಾನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಅರಣ್ಯ ಇಲಾಖೆ ಮತ್ತು ಸರ್ಕಾರಿ ಐಟಿಐ ಶಿಕ್ಷಣ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಬದಲಾಗಿ ಮಳೆಗಾಲದಲ್ಲಿ ಕನಿಷ್ಠ ಮೂರು ತಿಂಗಳು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದರು.
ಮನುಷ್ಯರಿಗೆ ಪರಿಸರದ ಪ್ರಜ್ಞೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಪರಿಸರ ದಿನ ಆಚರಿಸುವುದು ಅನಿವಾರ್ಯವಾಗಿದೆ. ನಮ್ಮ ಸುತ್ತಮುತ್ತಲ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರಬೇಕು. ಸ್ವಾರ್ಥಕ್ಕಾಗಿ ಮನುಷ್ಯ ಇಂದು ಪರಿಸರವನ್ನು ನಾಶ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಪರಿಸರ ದಿನ ಮೂಲಕ ಗಿಡಗಳನ್ನು ನೆಟ್ಟು ಪರಿಸರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಪರಿಸರದ ಸಂರಕ್ಷಣೆಯ ಕಾಳಜಿ ಮೂಡುತ್ತಿರುವುದು ಸಂತಸದ ವಿಷಯವಾಗಿದ್ದು ಹೆಚ್ಚಿನ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣ್ ಕುಮಾರ್ ಮಾತನಾಡಿ, ಮನುಕುಲದ ಉಳಿವಿಗಾಗಿ ಪರಿಸರ ಸಂರಕ್ಷಣೆ ಅತ್ಯಗತ್ಯ. ಸೌರಮಂಡಲದಲ್ಲಿ ಮನುಷ್ಯ ವಾಸಿಸಲು ಯೋಗ್ಯವಾದ ಪರಿಸರ ಇರುವುದು ಭೂಮಿಯಲ್ಲಿ ಮಾತ್ರ. ಆದ್ದರಿಂದ ಇದನ್ನು ಸಂರಕ್ಷಣೆ ಮಾಡಬೇಕು ಎಂದರು.
ಆಮ್ಲಜನಕ ಉತ್ಪಾದನೆ ಮಾಡುವ ಕಾರ್ಖಾನೆಗಳು ಎಲ್ಲಿಯೂ ಇಲ್ಲ. ಗಿಡ ಮರಗಳಿಂದ ಮಾತ್ರ ಶುದ್ಧ ಗಾಳಿಯನ್ನು ಪಡೆಯಲು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದಾಗಿ ನಾವೆಲ್ಲರೂ ಸಂಕಷ್ಟ ಎದುರಿಸುತ್ತಿದ್ದೇವೆ. ಜಿಲ್ಲೆಯಲ್ಲಿಯೇ ಗರಿಷ್ಠ ಉಷ್ಣಾಂಶ 40 ಡಿಗ್ರಿ ತಲುಪಿದ್ದು ಆತಂಕಕಾರಿ ವಿಷಯ ಎಂದರು.
ನ್ಯಾಯಾಧೀಶರಾದ ಎಂ.ಆರ್.ಯೋಗೇಶ್, ಶ್ವೇತಾ, ಸರ್ಕಾರಿ ಅಭಿಯೋಜಕ ಶ್ರೀನಾಥ್, ಡಿಆರ್‌ಎಫ್‌ಒಗಳಾದ ಪಾರ್ವತಿ, ಶುಭ, ಅರಣ್ಯ ಇಲಾಖೆಯ ಪೃಥ್ವಿ, ಸುರೇಶ್, ಹರೀಶ್, ರಾಜು, ಯಲುಗರೇಶ್, ಪೂರ್ಣಿಮಾ ಮತ್ತಿತರರು ಹಾಜರಿದ್ದರು.