ರಹಸ್ಯ ತಿಳಿದು ಜ್ಯೋತಿಷ ಫಲ ಹೇಳಲಿ

Jyotisha
Published on

ಹುಬ್ಬಳ್ಳಿ: ಜ್ಯೋತಿಷವು ಸಕಲ ಶಾಸ್ತ್ರಗಳ ಸಂಗಮ. ಅವುಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ, ಜಾತಕದೊಳಗೆ ಹುದುಗಿರುವ ರಹಸ್ಯವನ್ನು ತಿಳಿದು ಕೇಳಲು ಬಂದವರ ಫಲ ಹೇಳಿದರೆ ಸಮಾಜಕ್ಕೆ ಪ್ರಯೋಜನವಾದೀತು. ಕೇಳುಗರಿಗೆ ಸಮಾಧಾನ ತಂದೀತು ಎಂದು ಧಾರವಾಡ ಪಂಚಾಂಗ ಕರ್ತೃ, ಹಿರಿಯ ವಿದ್ವಾಂಸ ಡಾ. ರಾಜೇಶ್ವರಿ ಶಾಸ್ತ್ರಿ ಹೇಳಿದರು.

ನಗರದ ಗೋಕುಲ ರಸ್ತೆ ಶ್ರೇಯಾ ಎಸ್ಟೇಟ್‌ನಲ್ಲಿರುವ ತ್ರಿನೇತ್ರ ಲಕ್ಷ್ಮೀ ನರಸಿಂಹ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಅಖಿಲ ಕರ್ನಾಟಕ ಜ್ಯೋತಿಷಿಗಳ ಒಕ್ಕೂಟವು ಸಂಘಟಿಸಿದ್ದ ರಾಜ್ಯ ಮಟ್ಟದ ಜ್ಯೋತಿಷ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಹಿರಿಯರು ಅಧ್ಯಯನ, ಸಂಶೋಧನೆ ಮತ್ತು ಸಾರ್ವಜನಿಕ ಬದುಕಿನ ನಿಕಟ ಪರಿಚಯದಿಂದ ಕರಾರುವಕ್ಕಾಗಿ ಮುಂದಾಗುವ ಘಟನೆಗಳನ್ನು ಹೇಳಬಲ್ಲವರಾಗಿದ್ದರು ಎಂದರು.

ಸಮ್ಮೇಳನ ಉದ್ಘಾಟಿಸಿದ ಮೈಸೂರು ಸುತ್ತೂರು ಮಠದ ಪಂಚಾಂಗ ಕರ್ತೃ ಸಿದ್ಧಾಂತಿ ಕೆ.ಜಿ.ಪುಟ್ಟಹೊನ್ನಯ್ಯ ಮಾತನಾಡಿ, ಜ್ಯೋತಿಷದಿಂದ ಸಮಾಜಕ್ಕೆ ಪ್ರಯೋಜನವಿದೆ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ, ವಾಸ್ತು ತಜ್ಞ ಸುರೇಶ ಕೊಪ್ಪರ ಮಾತನಾಡಿ, ಜ್ಯೋತಿಷಿಗಳ ವಾಣಿ ಶುದ್ಧವಾಗಬೇಕಾದರೆ ಸನ್ಮಾರ್ಗದಲ್ಲಿ ನಡೆಯುವುದು ಅತ್ಯಗತ್ಯ. ಶಾಸ್ತ್ರಗಳ ಆಳವಾದ ಅಧ್ಯಯನ, ತಪಸ್ಸು ಮುಖ್ಯ ಎಂದರು.

ಹಿರಿಯರಾದ ರಾಜೇಶ್ವರಿ ಶಾಸ್ತ್ರಿ, ಪುಟ್ಟ ಹೊನ್ನಯ್ಯ, ಗುರುರಾಜ ಹೆರಕಲ್, ಪ್ರೊ.ಸಿ.ಆರ್.ಜೋಶಿ ಅವರಿಗೆ ಜ್ಯೋತಿಷ ಸಿದ್ಧಾಂತ ಸಾಮ್ರಾಟ್ ಬಿರುದು ನೀಡಿ ಸನ್ಮಾನಿಸಲಾಯಿತು. ಪಂ. ರವಿ ಆಚಾರ್ ಮತ್ತೀಹಳ್ಳಿ, ಹಿರಿಯ ಜ್ಯೋತಿಷಿಗಳಾದ ಬಿ.ಬಿ. ಸ್ವಾಮಿ, ಶ್ರೀಪಾದ ಕುಲಕರ್ಣಿ, ಎಸ್.ವಿ. ಘೋರ್ಪಡೆ, ಎನ್.ಎಂ. ಮಂಗಳೂರು, ಜಿ.ಎಸ್. ಸಾಲಿಮಠ, ನವೀನ ಶಾಸ್ತ್ರಿ ಪುರಾಣಿಕಮಠ, ಸಂಗಮೇಶ ಗೋರಾಬಾಳ, ಆರ್.ಬಿ. ಕುಲಕರ್ಣಿ, ಇತರರನ್ನು ಒಕ್ಕೂಟದ ಪರವಾಗಿ ಸನ್ಮಾನಿಸಲಾಯಿತು.

ಪ್ರಹ್ಲಾದ ಜೋಶಿ ವೇದಘೋಷ ಹಾಡಿದರು. ವೀಣಾ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಆನಂದ ಹಂದಿಗೋಳ ಸ್ವಾಗತಿಸಿದರು. ಪ್ರೊ. ಶ್ರೀಕಾಂತ ಮಂಗಸೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜಯ ತ್ರಾಸದ ವಂದಿಸಿದರು. ಮಹಾದೇವಿ ದೊಡ್ಡಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net