

ಮದ್ದೂರು: ಸಂಘ, ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ನೊಂದವರ ಬಾಳಿಗೆ ಆಸರೆಯಾಗಬೇಕೆಂದು ಶಾಸಕ ಕೆ.ಎಂ.ಉದಯ್ ಸಲಹೆ ನೀಡಿದರು.
ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮದ್ದೂರು ಕ್ರೀಡಾ ಬಳಗದ ಸರ್ವ ಸದಸ್ಯರ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮದ್ದೂರು ಕ್ರೀಡಾಬಳಗ ಬೃಹದಾಕಾರವಾಗಿ ಬೆಳೆದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಪಟ್ಟಣ ವ್ಯಾಪ್ತಿಯ ಪ್ರಮುಖ ವೃತ್ತಗಳಲ್ಲಿ ಸಾಧನೆ ಮಾಡಿದ ಸಾಧಕರ ಪುತ್ಥಳಿಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು ಅದರಲ್ಲೂ ಪಟ್ಟಣದ ಪ್ರವಾಸಿ ಮಂದಿರದ ಬಳಿ ನಾಡಪ್ರಭು ಕೆಂಪೇಗೌಡ ಪುತ್ಥಳಿಯನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು ಇದಕ್ಕೆ ಪಕ್ಷಾತೀತವಾಗಿ ಸಮಿತಿಯೊಂದನ್ನು ರಚನೆ ಮಾಡಲು ಕ್ರಮ ವಹಿಸಿರುವುದಾಗಿ ಶಾಸಕ ಕೆ.ಎಂ.ಉದಯ ತಿಳಿಸಿದರು.
ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ಮಾಡಬೇಕೇ ಹೊರತು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರಸದೆ ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಕ್ರೀಡಾ ಬಳಗದ ಅಧ್ಯಕ್ಷ ಕಾಂತರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಜಮೀನನ್ನು ಖರೀದಿಸಿ ಹೊರಾಂಗಣ ಕ್ರೀಡಾಂಗಣ ಮತ್ತು ಈಜುಕೊಳ ನಿರ್ಮಿಸಲು ಕ್ರಮ ವಹಿಸಿ ವಿವಿಧ ಗ್ರಾಮಗಳಲ್ಲಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ಕ್ರೀಡಾ ಬಳಗದ ಮಹಾಪೋಷಕ ರಾಜಣ್ಣ, ಉಪಾಧ್ಯಕ್ಷ ಜಿ.ಬಿ.ಸಿದ್ದರಾಮು, ಕಾರ್ಯದರ್ಶಿ ಸಿ.ಬಿ.ಕುಮಾರ್, ಜಂಟಿ ಕಾರ್ಯದರ್ಶಿ ಎಚ್.ಕೆ.ನಾರಾಯಣ್‌ಗೌಡ, ಖಜಾಂಚಿ ಸಿದ್ದಯ್ಯ, ಕ್ರೀಡಾ ಕಾರ್ಯದರ್ಶಿ ಜೆ.ಜೆ.ಶಿವಣ್ಣ, ನಿರ್ದೇಶಕರಾದ ಇ.ಎಂ.ಕೃಷ್ಣಪ್ಪ, ಕೆ.ಪುಟ್ಟಸ್ವಾಮಿ, ಟಿ.ಎಸ್.ಜಯರಾಮು, ಜಿ.ಬಿ.ಕೃಷ್ಣ, ಎನ್.ಎಸ್.ಕೃಷ್ಣೇಗೌಡ, ಬಿ.ಜಿ.ನಾರಾಯಣ್‌ಗೌಡ, ನಿರ್ಗಮಿತ ಅಧ್ಯಕ್ಷ ವಿ.ಕೆ.ಜಗದೀಶ್ ಇದ್ದರು.