

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ ಮತ್ತು ನೃತ್ಯ ಸಾಧನೆಯಲ್ಲಿ ತಲ್ಲೀನತೆ ಹೊಂದುವವರು ಮಾತ್ರ ಸಾಧಕರಾಗುತ್ತಾರೆ. ಸಂಗೀತಗಾರರು, ನೃತ್ಯಗಾರರು ಹಣದ ಬೆನ್ನು ಹತ್ತದೆ ಸಾಧನೆಯಲ್ಲಿ ತಲ್ಲೀನರಾಗಬೇಕು ಎಂದು ಗಾಯಕ ಡಾ. ಮೃತ್ಯಂಜಯ ಶೆಟ್ಟರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಎಸ್.ಎಸ್. ಎಲಿಗಾರ ಮತ್ತು ಅಮರೇಶ ಎಲಿಗಾರ (ಯಲಿಗಾರ) ಸ್ಮರಣಾರ್ಥ ದತ್ತಿ ನಿಮಿತ್ತ ಶಮಂತಕ ಕೆ.ಜಿ. ಕಲಾರ್ಪಣ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಭರತನಾಟ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೃತ್ಯ ಮತ್ತು ಸಂಗೀತ ದೇವರಿಗೆ, ನಿಸರ್ಗಕ್ಕೆ ಪ್ರಿಯವಾದದ್ದು. ದೇವರಿಗೆ ನಮ್ಮಲ್ಲಿರುವಂತಹ ಸಂಪತ್ತು ಬೇಕಾಗಿಲ್ಲ. ನಮ್ಮಲ್ಲಿರುವಂತಹ ಸಂಗೀತ, ನೃತ್ಯ ಕಲೆ ಬೇಕಾದದ್ದು. ಇತಿಹಾಸ ನೋಡಿದಾಗ ಪುರಾಣ, ಪುಣ್ಯ ಕಥೆಗಳನ್ನು ಕೇಳಿದಾಗ ನೃತ್ಯಗಾರರು, ಸಂಗೀತಗಾರರು ತಮ್ಮ ಅಚಲ ಸಾಧನೆಯಿಂದ ನಿಸರ್ಗವನ್ನೇ ತಮ್ಮ ಮುಷ್ಟಿಯಲ್ಲಿ ಪಡೆದು ಮಳೆ ಸುರಿಸಿದ್ದಾರೆ ಎಂದರು.
ಮನುಷ್ಯನಲ್ಲಿ ನೃತ್ಯ, ಸಂಗೀತ ಕಲೆಗಳು ಆದಿ ಅನಾದಿ ಕಾಲದಿಂದಲೂ ಬಳುವಳಿಯಾಗಿ ಬಂದಿವೆ. ಶುಭ ಕಾರ್ಯಗಳಲ್ಲಿ ಸೋಬಾನ ಪದ, ಕರಡಿ ಮಜಲು, ಭಜನೆ ಇತ್ಯಾದಿಗಳನ್ನು ಪ್ರತಿದಿನ ನೋಡುತ್ತಿದ್ದೇವೆ. ಸಂಗೀತದಲ್ಲಿ ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನಸೂರ, ಪಂಚಾರಿ ಮತ್ತಿಗಟ್ಟಿ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಸಾಧನೆಯ ಶಿಖರವನ್ನೇರಿದವರು. ಈ ಸಾಧಕರು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಅವರ ಸಾಧನೆಯಿಂದ ಉಳಿದಿದ್ದಾರೆ ಎಂದರು.
ಗದಗ ಪಂ. ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯೆ ಸುಮಿತ್ರಾ ಕಾಡದೇವರಮಠ ಮಾತನಾಡಿದರು.
ಸವಿತಾ ಹೆಗಡೆ ಹಾಗೂ ಅತುಲ್ ಬಾಲು ಅವರ ಶಿಷ್ಯ ಶಮಂತಕ ಕೆ.ಜಿ. ಮತ್ತು ಮಿಹಿರ ಭರತನಾಟ್ಯ ಪ್ರಸ್ತುತಪಡಿಸಿದರು. ಶಂಕರ ಹಲಗತ್ತಿ, ಎಂ.ಎಂ. ಚಿಕ್ಕಮಠ, ಜಗದೀಶ ಕಾಡದೇವರಮಠ, ಜಯಶ್ರೀ, ಅಶೋಕ ಚಿಕ್ಕೋಡಿ, ಇತರರು ಇದ್ದರು.
ಸತೀಶ ತುರಮರಿ ಸ್ವಾಗತಿಸಿದರು.