

ಮೇಲುಕೋಟೆ: ನವೆಂಬರ್‌ನಲ್ಲಿ ನಡೆಯುವ ರಾಜಮುಡಿ ಉತ್ಸವ ವೇಳೆ ಭಕ್ತರ ಉಪಯೋಗಕ್ಕೆ ಅನ್ನದಾನ ಭವನ ಬಳಕೆ ಮಾಡುವಂತೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
ಮೇಲುಕೋಟೆ ದೇವಾಲಯದ ಅಭಿವೃದ್ಧಿ ಸಂಬಂಧ ಗುರುವಾರ ಸಭೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಜಿಲ್ಲಾಧಿಕಾರಿಗಳು ಮತ್ತು ಧಾರ್ಮಿಕದತ್ತಿ ಇಲಾಖೆಯ ಆಯುಕ್ತರ ಅನುಮತಿ ಪಡೆದು ಬೇಕಾದ ಪೂರ್ವ ಸಿದ್ಧತೆ ಮಾಡಿಕೊಂಡು ಮೇಲುಕೋಟೆ ಪುಳಿಯೋಗರೆ ಇರುವಂತೆ ಅನ್ನದಾನ ಪ್ರಾರಂಭಿಸಿ ಎಂದ ಶಾಸಕರು, ದೇವಾಲಯದಲ್ಲಿ ಭಕ್ತರಿಗೆ ಮಹಾಮಂಗಳಾರತಿಯ ನಂತರ ಪ್ರಸಾದ ವಿನಿಯೋಗ ಮಾಡಲು ಯೋಜನೆ ರೂಪಿಸಬೇಕು. ದೇವಾಲಯದಲ್ಲೇ ಲಡ್ಡು ಪ್ರಸಾದ ಮಾರಾಟ ಕೇಂದ್ರ ಆರಂಭಿಸಬೇಕು. ದೇವಾಲಯದ ಆದಾಯ ಹೆಚ್ಚಿಸಲು ಯೋಜನೆಗಳನ್ನು ಜಾರಿಗೆ ತಂದು ದೇಗುಲದ ಉತ್ಸವಗಳು ವಿಶೇಷವಾಗಿ ನಡೆಯಲು ವ್ಯವಸ್ಥೆಯಾಗಬೇಕು. ದೇಗುಲದ ಹಣಕಾಸು ವ್ಯವಹಾರವನ್ನು ಸಂಪೂರ್ಣ ಡಿಜಿಟಲ್ ಮೂಲಕ ಮಾಡಬೇಕು ಎಂದು ಸಲಹೆ ನೀಡಿದರು.
ಆಸ್ತಿ ಸಂರಕ್ಷಣೆಯ ಬಗ್ಗೆ ಗಂಭೀರವಾಗಿ ಚರ್ಚಿಸಿದ ಶಾಸಕರು, ದೇವಾಲಯದ ಕೈಪಿಡಿಯಲ್ಲಿರುವ ಜಮೀನುಗಳು ಹಾಗೂ ಸ್ಥಳಗಳು ದೇವಾಲಯದ ಹೆಸರಿಗೆ ತಕ್ಷಣ ಖಾತೆ ವರ್ಗಾವಣೆಯಾಗಬೇಕು ಗ್ರಾಪಂ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿ ಕ್ರಮ ವಹಿಸಬೇಕು. ಪರಭಾರೆಯಾಗಿರುವ ದೇವಾಲಯದ ಆಸ್ತಿ ಮರಳಿ ಪಡೆಯಲು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲು ದೇಗುಲದ ಅಧಿಕಾರಿಗೆ ಸೂಚಿಸಿದ್ದರೂ ಯಾವುದೇ ಕ್ರಮವಹಿಸದ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದರು.
ತಕ್ಷಣವೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ. ಸರ್ಕಾರಿ ಹಾಗೂ ದೇವಾಲಯದ ಜಾಗಗಳನ್ನು ಒತ್ತುವರಿ ಮಾಡಿರುವುದನ್ನು ಹತ್ತು ದಿನಗಳಕಾಲ ಇಲ್ಲೇ ಇದ್ದು ತೆರವು ಮಾಡುವ ಕಾರ್ಯ ಮಾಡುತ್ತೇನೆ . ಇದೇ ವೇಳೆ ಸರ್ಕಾರದ ಸೌಲಭ್ಯಗಳು ಮನೆ-ಮನೆಗೆ ತಲುಪುವಂತೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಗೋಲ್‌ಮಾಲ್ ನಿಯಂತ್ರಿಸಿ: ಶಾಸಕರ ಸಭೆಯ ವೇಳೆ ಕಾರ್ಯಕರ್ತರು ಹಲವು ದೂರು ಹಾಗೂ ಸಲಹೆಗಳನ್ನೂ ನೀಡಿದರು. ಪ್ರಥಮ ಸ್ಥಾನೀಕ ಕರಗಂ ರಾಮಪ್ರಿಯ, ಭಕ್ತರ ವಾಹನಗಳಿಗೆ ರಸ್ತೆ ಬದಲು, ಪಾರ್ಕಿಂಗ್ ಸ್ಥಳ ನಿಗದಿಮಾಡಬೇಕು. ನೈವೇದ್ಯಗಳ ಸೇವಾದರ ಪರಿಷ್ಕರಿಸಬೇಕು ಎಂದು ಸಲಹೆ ನೀಡಿದರು.
ಸ್ಥಳೀಯ ಯತೀಶ್ ಮಾತನಾಡಿ, ಮೇಲುಕೋಟೆಯಲ್ಲಿ ನಡೆಯುವ ಫೋಟೋಶೂಟ್ ರಸೀದಿ ನೀಡಿಕೆಯಲ್ಲಿ ಗೋಲ್‌ಮಾಲ್ ಹೆಚ್ಚಾಗಿದೆ. ಕಡಿಮೆ ಹಣ ಪಡೆದು ರಸೀದಿ ಇಲ್ಲದೆಯೇ ಫೋಟೋಶೂಟ್ ಮಾಡಲು ಅವಕಾಶ ನೀಡಲಾಗುತ್ತಿದೆ. ಇದರಿಂದ ದೇವಾಲಯಕ್ಕೆ ನಷ್ಟ ಉಂಟಾಗುತ್ತಿದೆ ಎಂದರು.
ಪ್ರಸಾದ ತಯಾರಿಕೆಯಲ್ಲಿ ಸಹ ಅಕ್ರಮವಾಗುತ್ತಿದೆ. ಇದನ್ನು ತಡೆಗಟ್ಟಬೇಕು ಎಂದು ಮೇಲುಕೋಟೆ ವಿಎಸ್‌ಎಸ್‌ಎಸ್‌ಎನ್ ಅಧ್ಯಕ್ಷ ಯೋಗಾ ನರಸಿಂಹೇಗೌಡ ಒತ್ತಾಯಿಸಿದರು.
ಕಳೆದ ವರ್ಷದಂತೆ ನವರಾತ್ರಿಗೆ ದೀಪಾಲಂಕಾರ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಎಂದು ರೈತ ಮುಖಂಡ ಟಗರು ದಿಲೀಪ್ ಸಲಹೆ ನೀಡಿದರು.
ಪಾರ್ಕಿಂಗ್ ಬದಲಾಗಬೇಕು : ದೇವಾಲಯದ ಬಳಿ ಭಕ್ತರು ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವುದರಿಂದ ದೇವಾಲಯದಲ್ಲಿ ನಡೆಯುವ ಉತ್ಸವಗಳಿಗೆ ಅಡಚಣೆಯಾಗುತ್ತಿದೆ. ಈಗ ಪ್ರತಿದಿನ ನವರಾತ್ರಿ ಉತ್ಸವಗಳು ನಡೆಯುತ್ತಿದೆ. ಹೀಗಾಗಿ ಗ್ರಾ.ಪಂ ಹಾಗೂ ಪೊಲೀಸರು ತಕ್ಷಣ ಕ್ರಮ ವಹಿಸಿ ಭಕ್ತರ ವಾಹನಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು. ಇದರಿಂದ ಸ್ವಚ್ಛತೆ ಕಾಪಾಡಲು, ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದು ಶಾಸಕರು ಸೂಚನೆ ನೀಡಿದರು.
ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್, ಇನ್‌ಪೋಸಿಸ್ ವ್ಯವಸ್ಥಾಪಕಿ ಪ್ರೀತಿಮಹದೇವ್, ಯೋಗೀಶ್, ಲಕ್ಷ್ಮಣ, ನಾಗಣ್ಣ, ಇತರರು ಇದ್ದರು.