

ವಿಜಯವಾಣಿ ಸುದ್ದಿಜಾಲ ಧಾರವಾಡ
ಚಿತ್ರ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಆರ್ಟ್ ಗ್ಯಾಲರಿ ಆರಂಭಿಸುವುದು ಅನಿವಾರ್ಯ ಎಂದು ಹಿರಿಯ ಕಲಾವಿದ ಎಂ.ಆರ್. ಬಾಳಿಕಾಯಿ ಹೇಳಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಹಿರಿಯ ಕಲಾವಿದರಾದ ಪಿ.ಆರ್. ತಿಪ್ಪೇಸ್ವಾಮಿ, ಸೋಮಶೇಖರ ಸಾಲಿ ಹಾಗೂ ಬಿ.ಕೆ. ಹುಬಳಿ ಜನ್ಮಶತಮಾನೋತ್ಸವ ನಿಮಿತ್ತ ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರ ಕಲಾಕೃತಿಗಳು ಕಲಾರಸಿಕರನ್ನು ತಲುಪಲು ಆರ್ಟ್ ಗ್ಯಾಲರಿ ಸೇತುವೆಯಂತಾಗಲಿದೆ. ಗ್ಯಾಲರಿಯಲ್ಲಿ ಕಲಾಕೃತಿಗಳ ಪ್ರದರ್ಶನ ನಿರಂತರವಾಗಿದ್ದರೆ ಕಲಾವಿರಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲಿ ಗ್ಯಾಲರಿ ಸ್ಥಾಪನೆಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಅಕಾಡೆಮಿ ಈ ವಿಷಯವಾಗಿ ಪ್ರಯತ್ನಿಸಲಿ ಎಂದರು.
ಹಿರಿಯ ಕಲಾವಿದರಾದ ಪಿ.ಆರ್. ತಿಪ್ಪೇಸ್ವಾಮಿ, ಸೋಮಶೇಖರ ಸಾಲಿ ಹಾಗೂ ಬಿ.ಕೆ. ಹುಬಳಿ ಕಲೆಯಲ್ಲಿ ಅಗಾಧ ಸಾಧನೆ ಮಾಡಿದ್ದಾರೆ. ಅವರು ನಮಗೆ ಚಿತ್ರ ಕಲೆಯ ಬುನಾದಿ ಹಾಕಿಕೊಟ್ಟಿದ್ದಾರೆ. ಅದೇ ಹಾದಿಯಲ್ಲಿ ಸಾಗಿ ಸಾಧನೆ ಮಾಡಬೇಕಿದೆ. ಯುವ ಕಲಾವಿದರು ಸಾಧಕ ಕಲಾವಿದರ ಜೀವನ ಸಾಧನೆ ಕುರಿತು ತಿಳಿದುಕೊಳ್ಳಬೇಕು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಸಂಗೀತ, ಚಿತ್ರಕಲೆ ಸೇರಿ ಎಲ್ಲ ಕಲೆಗಳಿಗೂ ಪ್ರೋತ್ಸಾಹ ಮುಖ್ಯ. ಚಿತ್ರಕಲೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿದ್ಯಾವರ್ಧಕ ಸಂಘದಲ್ಲಿ ಆರ್ಟ್ ಗ್ಯಾಲರಿ ಆರಂಭಿಸಲಾಗಿದೆ ಎಂದರು.
ವಿಶೇಷ ಆಹ್ವಾನಿತರಾಗಿ ವಿಜಯವಾಣಿ ಪತ್ರಿಕೆ ಬೆಂಗಳೂರು ಆವೃತ್ತಿ ಮುಖ್ಯ ವರದಿಗಾರ ರುದ್ರಣ್ಣ ಹರ್ತಿಕೋಟೆ, ವಿದ್ಯಾಧರ ಸಾಲಿ, ಜಯಂತ ಹುಬಳಿ ಆಗಮಿಸಿದ್ದರು. ಹಿರಿಯ ಕಲಾವಿದರಾದ ಸುರೇಶ ಹಾಲಭಾವಿ, ಗಾಯತ್ರಿ ಗೌಡರ, ಈಶ್ವರ ಜೋಶಿ, ಬಿ. ಮಾರುತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕರಿಯಪ್ಪ ಹಂಚಿನಮನಿ, ಇತರರು ಇದ್ದರು.
ಬಳಿಕ ಮೂವರು ಹಿರಿಯ ಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.