

ಹಿರೇಕೆರೂರ: ಮಳೆಯಿಂದ ಉಂಟಾಗುವ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಯು.ಬಿ. ಬಣಕಾರ ಸೂಚನೆ ನೀಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಮಳೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು. ಸಮಸ್ಯೆಗಳಿಗೆ ಎಲ್ಲ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಾಜಕಾಲುವೆ ಸೇರಿದಂತೆ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ಮಳೆ ನೀರು ಹರಿದು ಹೋಗಲು ಕ್ರಮವಹಿಸುವಂತೆ ಪಿಡಿಒಗಳಿಗೆ ಸೂಚನೆ ನೀಡಿದರು.
ಮಳೆ-ಗಾಳಿಯಿಂದ ಬೆಳೆ ಹಾಗೂ ಮನೆ ಹಾನಿಗಳ ಸ್ಥಳಕ್ಕೆ ತಕ್ಷಣವೇ ತೆರಳಬೇಕು. ಹಾನಿಯ ವರದಿ ಅತ್ಯಂತ ನಿಖರವಾಗಿರಬೇಕು. ಒಂದೊಮ್ಮೆ ವಿಳಂಬವಾದರೆ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ತೊಂದರೆಗೊಳಗಾಗುವ ಪ್ರದೇಶಗಳನ್ನು ಗುರುತಿಸಿಕೊಳ್ಳಬೇಕು. ಪರ್ಯಾಯ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದರು.
ತಹಸೀಲ್ದಾರ್ ಎಚ್. ಪ್ರಭಾಕರಗೌಡ, ರಟ್ಟಿಹಳ್ಳಿ ತಹಸೀಲ್ದಾರ್ ಕೆ. ಗುರುಬಸವರಾಜ, ರಟ್ಟಿಹಳ್ಳಿ ಇಒ ಟಿ.ಆರ್. ಮಲ್ಲಾಡದ, ಬಿಇಒ ಎನ್.ಶ್ರೀಧರ ಇದ್ದರು. ತಹಸೀಲ್ದಾರ್ ಕಚೇರಿಯ ಸಹಾಯಕ ಅಧಿಕಾರಿ ನಾಗರಾಜ ಕಟ್ಟಿಮನಿ ನಿರ್ವಹಿಸಿದರು.