

ಮೈಸೂರು: ಒಕ್ಕಲಿಗ ಸಮುದಾಯದ ನಾಯಕರು ಯಾವುದೇ ಪಕ್ಷದಲ್ಲಿರಿ. ಆದರೆ ಸಮಾಜದ ವಿಚಾರ ಬಂದಾಗ ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದರು.
ನಗರದ ಕಲಾಮಂದಿರದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ 515ನೇ ಜಯಂತಿ, ಪ್ರಶಸ್ತಿ ಪ್ರದಾನ ಹಾಗೂ ಸಂಘದ ಅಧ್ಯಕ್ಷ ಸಿ.ಜಿ.ಗಂಗಾಧರ್, ಮಹಿಳಾ ಘಟಕ ಅಧ್ಯಕ್ಷೆ ಶಾಂತಾ ಸುರೇಂದ್ರ ಅವರೂ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜ ವಿಚಾರ ಬಂದಾಗ ಯಾವುದೇ ಕ್ಷುಲ್ಲಕ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಜನರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ರಾಜಕಾರಣಿ ಮಾಡಬೇಕು. ಸಂಘ, ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಎಲ್ಲ ಸಮಾಜಗಳನ್ನು ಒಂದಾಗಿ ಕಂಡು ಬೆಂಗಳೂರು ಕಟ್ಟಿದ ಕೆಂಪೇಗೌಡರು ಆದರ್ಶವಾಗಬೇಕು. ಅದರಿಂದಲೇ ನಗರವು ವಿಶ್ವವಿಖ್ಯಾತವಾಗಿದೆ. ಬಾಲಗಂಗಾಧರನಾಥ ಸ್ವಾಮೀಜಿ ಮಠ ಹಾಗೂ ಸಮಾಜವನ್ನು ಕಟ್ಟಿದರು ಎಂದರು.
ಹಳೇ ಮೈಸೂರು ಭಾಗದಲ್ಲಷ್ಟೇ ಅಲ್ಲದೆ ರಾಜ್ಯದೆಲ್ಲೆಡೆ ಇರುವ ಒಕ್ಕಲಿಗರ ಅಭಿವೃದ್ಧಿ ಹಾಗೂ ಸಂಘಟನೆಗಾಗಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಪಕ್ಷಭೇದ ಮರೆತು, ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಎಲ್ಲರೂ ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಶ್ರಮಿಸುವುದು ಜವಾಬ್ದಾರಿ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘವು ಸಮುದಾಯದ ಉಪ ಪಂಗಡಗಳನ್ನು ಸಂಘಟಿಸುತ್ತಿರುವುದು ಶ್ಲಾಘನೀಯ. ಒಕ್ಕಲಿಗ ಸಮುದಾಯವು ಒಳಪಂಗಡಗಳಲ್ಲಿ ಹರಿದು ಹಂಚಿಹೋಗಿದೆ. ಉಪ ಪಂಗಡಗಳಲ್ಲಿ ಗುರುತಿಸಿಕೊಂಡ ಕಾರಣಕ್ಕೆ ಮೂಲ ಅಸ್ಮಿತೆ ಮರೆಯಬಾರದು ಎಂದು ಸಲಹೆ ನೀಡಿದರು.
ಸಮುದಾಯದ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾದಂತಹ ಕೆಟ್ಟ ಘಟನೆಗಳೂ ನಡೆದಿವೆ. ಪೊರಕೆ ಕಡ್ಡಿಗಳು ಒಗ್ಗಟ್ಟಾಗಿದ್ದರೆ ಕಸವನ್ನು ತೆಗೆಯಬಹುದು. ಬಿಡಿ ಬಿಡಿಯಾದರೆ ಸವಾಲು ಎದುರಿಸಬೇಕಾಗುತ್ತದೆ. ಸಮುದಾಯ ವ್ಯಕ್ತಿ ಬೆಳೆಯುತ್ತಿದ್ದರೆ ಏಣಿಯಾಗಬೇಕು, ಕಾಲೆಳೆಯುವ ಏಡಿಗಳಾಗಬಾರದು ಎಂದು ಕಿವಿಮಾತು ಹೇಳಿದರು.
ರೈತ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಿದೆ. ಹಿಂದು ಧರ್ಮ ವಂಶವೃಕ್ಷವಾದರೆ ಒಕ್ಕಲಿಗ, ಕುರುಬ, ಲಿಂಗಾಯತ ಸೇರಿದಂತೆ ಎಲ್ಲ ಸಮುದಾಯಗಳು ಕವಲುಗಳು. ಜಾತಿ ಹೆಸರಿನಲ್ಲಿ ಬೈದಾಗ ಪ್ರತಿಕ್ರಿಯೆ ಕೊಡುತ್ತಾರೆ. ಆದರೆ, ಧರ್ಮದ ವಿಷಯ ಬಂದಾಗ ಮೌನಿಗಳಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಶ್ರಮಜೀವಿಗಳಾದ ಸಮಾಜದ ಜನರಿಗೆ ಫಲ ಸಿಗಬೇಕು. ಯಾವುದೇ ಕ್ಷೇತ್ರದಲ್ಲಿದ್ದರೂ ಪರಿಣತಿ ಹೊಂದಬೇಕು. ಜ್ಞಾನ, ಕೌಶಲಕ್ಕೆ ಆದ್ಯತೆ ನೀಡಬೇಕು. ಸಂಘವು ಸಮುದಾಯದ ಅಭಿವೃದ್ಧಿಗೆ ದುಡಿಯಬೇಕು ಎಂದರು.
ಶಾಸಕ ಕೆ.ಹರೀಶ್‌ಗೌಡ ಮಾನತಾಡಿ, ಕುವೆಂಪು ಅವರ ಶಿಕ್ಷಣ ಪ್ರೇರಣೆ, ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಸಂಘಟನೆಯ ಶಕ್ತಿಯಿಂದಾಗಿ ಸಮಾಜದ ಜನರು ಎಲ್ಲ ರಂಗದಲ್ಲೂ ಛಾಪು ಮೂಡಿಸಿದ್ದಾರೆ. ಅನಕ್ಷರಸ್ಥರೆಲ್ಲ ವಿದ್ಯಾವಂತರಾಗಿ ಸಂಘಟಿತರಾಗಲು ಸಾಧ್ಯವಾಯಿತು ಎಂದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಎಲ್ಲರೂ ದ್ವೇಷ ಭಾವ ಬಿಟ್ಟು ಒಟ್ಟಾಗಿ ಬದುಕಬೇಕು. ಆದಿಚುಂಚನಗಿರಿ ಮಠವು ಮಾವಿನ ವೃಕ್ಷವಾಗಿ ಬೆಳೆದಿದೆ. ಸಮಾಜದ ಸುಧಾರಣೆಗೆ ಸಂಘವು ಕಂಕಣಬದ್ಧವಾಗಿ ದಿಟ್ಟ ಹೆಜ್ಜೆ ಇಟ್ಟಿರುವುದು ಹೆಮ್ಮೆಯಾಗಿದೆ ಎಂದು ಶ್ಲಾಘಿಸಿದರು.
ಇದೇ ವೇಳೆ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರೊ.ಆರ್.ಅನುರಾಧ ಪಟೇಲ್, ಡಾ.ಎಂ.ಸಿ.ರಂಗಸ್ವಾಮಿ, ಡಾ.ಸಿ.ಪಿ.ಕೃಷ್ಣಕುಮಾರ್, ಡಿ.ಮಾದೇಗೌಡ, ಡಾ.ಶುಶ್ರುತ್‌ಗೌಡ, ಡಾ.ಇ.ಸಿ.ನಿಂಗರಾಜ್‌ಗೌಡ, ಲಿಂಗಪ್ಪ, ಶೈಲ ರವಿಕುಮಾರ್, ಸಿ.ನಾರಾಯಣಗೌಡ, ಡಾ.ದೇವೇಗೌಡ, ಡಾ.ವಸಂತ ಕುಮಾರ್ ತಿಮಕಾಪುರ, ಎಸ್.ಪಿ.ಶಂಕರೇಗೌಡ, ಡಾ.ದತ್ತೇಶ್‌ಕುಮಾರ್, ಗೋಪಾಲಸ್ವಾಮಿ, ವಿ.ಸಿ.ರವಿಕುಮಾರ್, ಕೆ.ದಿನೇಶ್, ರಾಜುಗೌಡ, ಚಲುವರಾಜು, ರವಿ ಪಾಂಡವಪುರ, ಚಿತ್ರಕಲಾ ನಾಗರಾಜು ಅವರಿಗೆ ‘ಶ್ರೀ ಬಾಲಗಂಗಾಧರನಾಥ ಸ್ವಾಮಿ ಸೇವಾರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಮುದಾಯದ ಆರು ದಂಪತಿಗೆ ‘ಆದರ್ಶ ಒಕ್ಕಲಿಗ ದಂಪತಿ’ ಪ್ರಶಸ್ತಿ ನೀಡಲಾಯಿತು.
ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್, ಸಿ.ಎನ್ ಮಂಜೇಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ನರೇಂದ್ರ, ಮುಖಂಡ ಡಿ.ಮಾದೇಗೌಡ, ಐಪಿಎಸ್ ಅಧಿಕಾರಿ ಎ.ಎನ್.ಪ್ರಕಾಶ್‌ಗೌಡ, ಸಂಘದ ಅಧ್ಯಕ್ಷ ಸಿ.ಜಿ.ಗಂಗಾಧರ್ ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಿಂದ ಕಲಾಮಂದಿರದ ವರೆಗೆ ಕಲಾತಂಡಗಳೊಂದಿಗೆ ಬೆಲ್ಳಿ ರಥದಲ್ಲಿ ನಾಡಪ್ರಭು ಕೆಂಪೇಗೌಡರ ಭವ್ಯ ಮೆರವಣಿಗೆ ನೆರವೇರಿತು.