ಎಲ್ಲ ಬ್ಯಾಂಕ್‌ಗಳೂ ಲೋಕ ಅದಾಲತ್ ನಡೆಸಲಿ: ನ್ಯಾ. ಎಸ್.ರವಿಕುಮಾರ್ ಸಲಹೆ

mysore
Published on

ಮೈಸೂರು: ಬಾಕಿ ಇರುವ ಸಾಲ ವಸೂಲಾತಿ ಪ್ರಕರಣಗಳ ವಿಲೇವಾರಿಗಾಗಿ ಎಲ್ಲ ಬ್ಯಾಂಕ್‌ಗಳಲ್ಲೂ ಲೋಕ ಅದಾಲತ್ ನಡೆಸಬೇಕು ಎಂದು ಚೆನ್ನೈನ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಾಧೀಕರಣ(ಎಡಿಆರ್‌ಟಿ)ದ ಅಧ್ಯಕ್ಷ, ನ್ಯಾಯಮೂರ್ತಿ ಎಸ್.ರವಿಕುಮಾರ್ ಸಲಹೆ ನೀಡಿದರು.


ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣ(ಡಿಆರ್‌ಟಿ) ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನಜರ್‌ಬಾದ್‌ನಲ್ಲಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್ ಉದ್ಘಾಟಿಸಿ ಮಾತನಾಡಿದರು.


ಬಾಕಿ ಇರುವ ಪ್ರಕರಣಗಳ ವಿಲೇವಾರಿಗೆ ಕೆನರಾ ಬ್ಯಾಂಕ್ ಲೋಕ ಅದಾಲತ್ ಆಯೋಜಿಸಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಕ್ರಮ ವಹಿಸಿದೆ. ಸಾಲಗಾರರು ಮತ್ತು ಬ್ಯಾಂಕ್‌ಗೂ ಇದು ಅನುಕೂಲವಾಗಲಿದೆ. ಆದ್ದರಿಂದ ಕೆನರಾ ಬ್ಯಾಂಕ್ ಮಾದರಿಯಲ್ಲಿ ಎಲ್ಲ ಬ್ಯಾಂಕ್ ಲೋಕ ಅದಾಲತ್ ಆಯೋಜನೆ ಮಾಡಿದರೆ ಸಾಲ ವಸೂಲಾತಿ ದಾವೆಗಳ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ ಎಂದರು.


ಚೆನ್ನೈನ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಾಧೀಕರಣಯಲ್ಲಿ 12 ಸಾವಿರ, ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣದಲ್ಲಿ 5 ಸಾವಿರ ಪ್ರಕರಣಗಳಿವೆ. ಇದು ಅಧಿಕ ಕಾರ್ಯ ಒತ್ತಡವನ್ನು ಸೃಷ್ಟಿ ಮಾಡಿದೆ. ಈ ನ್ಯಾಯಾಧೀಕರಣ ಕಾರ್ಯವ್ಯಾಪ್ತಿ ಸಿಮೀತವಾಗಿದೆ. ಇವುಗಳು ಬಗೆಹರಿಯಲು ಬಹಳಷ್ಟು ವರ್ಷಗಳೇ ಹಿಡಿಯಲಿದೆ. ನ್ಯಾಯದಾನ ವಿಳಂಬವಾಗಲಿದೆ. ಇದರಿಂದ ಬ್ಯಾಂಕ್ ಮತ್ತು ಪಕ್ಷಿದಾರರಿಬ್ಬರಿಗೂ ನಷ್ಟ ಎಂದರು.


ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಲೋಕ ಅದಾಲತ್ ಉತ್ತಮ ಉಪಕ್ರಮವಾಗಿದೆ. ಆದ್ದರಿಂದ ಪ್ರತಿ ತಿಂಗಳು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಇದನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷಿದಾರರು, ಬ್ಯಾಂಕ್ ನಡುವೆ ಪರಸ್ಪರ ಸಮ್ಮತಿ, ಸೌಹಾರ್ದತೆಯ ಮೂಲಕ ಹಳೇ ಪ್ರಕರಣಗಳಿಗೆ ಅಂತ್ಯ ಹಾಡಬೇಕಿದೆ ಎಂದು ಹೇಳಿದರು.


ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗುರುರಾಜ ಸೋಮಕ್ಕಳವರ್ ಮಾತನಾಡಿ, ಜಿಲ್ಲೆಯಲ್ಲಿ 900 ಸಾಲ ವಸೂಲಾತಿ ಪ್ರಕರಣಗಳಿವೆ. ಇದರಲ್ಲಿ 130 ಕೇಸ್‌ಗಳು ಇತ್ಯರ್ಥ ಮಾಡಲು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.


ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಶೀಘ್ರ ತೀರ್ಮಾನಕ್ಕಾಗಿ ಇದೊಂದು ಸುವರ್ಣ ಅವಕಾಶ. ಪರಸ್ಪರ ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನ ಮಾಡುವುದರಿಂದ ಬಾಂಧವ್ಯ ಉಳಿಯುತ್ತದೆ ಎಂದರು.


ಬಹಳಷ್ಟು ಜನರು ಸಾಲ ಮಾಡಿ ಅದನ್ನು ತೀರಿಸಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ತೆಗೆದುಕೊಂಡ ಸಾಲವನ್ನೂ ಯಾವತ್ತಿದ್ದರೂ ತೀರಿಸಲೇಬೇಕಾಗುತ್ತದೆ. ಅಲ್ಲಿಯ ಬ್ಯಾಂಕ್ ಸಹ ಬಿಡಲ್ಲ. ಹೀಗಾಗಿ, ಸಾಲಗಾರರು ಲೋಕ ಅದಾಲತ್‌ನಲ್ಲಿ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರುವ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.


ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣದ ಅಧ್ಯಕ್ಷ ಇಮ್ತಿಯಾಜ್ ಅಲಿ ಮಾತನಾಡಿ, ಲೋಕ ಅದಾಲತ್ ನ್ಯಾಯಾಂಗ ವ್ಯವಸ್ಥೆಗೆ ಒಂದು ರೀತಿ ಬೋನಸ್ ಇದ್ದಂತೆ. ಇದು ಕೋರ್ಟ್ ಮೇಲಿನ ಕಾರ್ಯ ಒತ್ತಡವನ್ನು ಕಡಿಮೆ ಮಾಡಿ, ಕಕ್ಷಿದಾರರಿಗೂ ಅನುಕೂಲ ಕಲ್ಪಿಸಿಕೊಡುತ್ತದೆ ಎಂದರು.


ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣದ ರಿಜಿಸ್ಟ್ರಾರ್ ಶ್ರೀನಿವಾಸ್, ಸುಬ್ರಮಣಿ, ಸಹಾಯಕ ರಿಜಿಸ್ಟ್ರಾರ್ ರಂಜನ್ ಕೇಳ್ಕರ್, ನಿವೃತ್ತ ಜಿಲ್ಲಾ ನ್ಯಾಯಾಧೀಶ ಮತ್ತು ಸಂಧಾನಕಾರರಾದ ಸಿದ್ದೇಗೌಡ, ಎಸ್.ಎಚ್.ಪುಷ್ಪಾಂಜಲಿ, ಕೆನರಾ ಬ್ಯಾಂಕ್‌ನ ಬೆಂಗಳೂರಿನ ಜನರಲ್ ಮ್ಯಾನೇಜರ್ ಎಂ.ಮಹೇಶ್ ಪೈ, ಡಿಎಂ ಗುರ್ವಿಂದರ್ ಪಾಲ್ ಸಿಂಗ್, ಪ್ರಾದೇಶಿಕ ವ್ಯವಸ್ಥಾಪಕರಾದ ರಾಜಶೇಖರ್, ಉಮೇಶ್, ಸಂಗಮೇಶ್, ಬೆಂಗಳೂರಿನ ಎಆರ್‌ಎಂಬಿ ಮುಖ್ಯ ವ್ಯವಸ್ಥಾಪಕ ರಂಜನ್‌ಕುಮಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net