

ಕೃಷಿ ಮಾಹಿತಿಯನ್ನು ಹಳ್ಳಿ ಹಳ್ಳಿಗೆ ತಲುಪಿಸಿ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಬಿ.ಎಂ. ಸವಿತಾ ಸಲಹೆ ನೀಡಿದರು.
ಸಂಜೀವಿನಿ- ಕೆಎಸ್‌ಆರ್‌ಎಲ್‌ಪಿಎಸ್, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿರುವ ಪರಿಸರ ಕೃಷಿ ವಿಧಾನಗಳು ಕುರಿತ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಕೃಷಿ ಸಖಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಬಲೀಕರಣ ಉದ್ದೇಶದಿಂದ ಸರ್ಕಾರ ರೂಪಿಸಿರುವ ದೊಡ್ಡ ಯೋಜನೆ ಇದಾಗಿದೆ. ಸಖಿ ಎಂದರೇ ವಿಶ್ವಾಸ. ನೀವು ಕೂಡ ಜನರ ವಿಶ್ವಾಸ ಗಳಿಸಿ, ಸರ್ಕಾರದ ಯೋಜನೆಗಳನ್ನು ತಲುಪಿಸಿ, ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರಂತೆ ಕೃಷಿ ಸಖಿ ಕೂಡ ಒಂದು ಹುದ್ದೆಯಾಗಿದೆ. ಕೃಷಿ ತಾಂತ್ರಿಕತೆಯ ಮಾಹಿತಿಯನ್ನು ಕೆಳಸ್ತರಕ್ಕೆ ತಲುಪಿಸಲು ಕೃಷಿ ಸಖಿಯರು ಜನತೆ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಬೇಸಾಯಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ರಾಮಚಂದ್ರ ಮಾತನಾಡಿ, ಕಳೆದ ವರ್ಷ 3 ತಂಡಗಳಲ್ಲಿ 90 ಜನರಿಗೆ ತರಬೇತಿ ನೀಡಲಾಗಿದೆ. ಈ ಬಾರಿ 5 ತಂಡಗಳಲ್ಲಿ 167 ಜನರಿಗೆ ತರಬೇತಿ ನೀಡಲಾಗುವುದು. ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ, ಅರಣ್ಯ ಇಲಾಖೆಯ ನೂತನ ತಾಂತ್ರಿಕತೆಗಳನ್ನು ರೈತರಿಗೆ ಪರಿಣಾಮಕಾರಿಯಾಗಿ ತಿಳಿಸುವ ಹೊಣೆ ಕೃಷಿ ಸಖಿಯರದು ಎಂದರು.
ಮನೆ ಮನೆಗೆ ತೆರಳಿ, ಮಾಹಿತಿ ನೀಡಿ, ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರ ಜೀವನೋಪಾಯಕ್ಕೆ ನೆರವಾಗಬೇಕು. ತಂತ್ರಜ್ಞಾನದ ಜತೆಗೆ ಕೃಷಿ ವಿಮೆ, ಬೆಳೆಗಳ ಮೌಲ್ಯವರ್ಧನೆ, ಮಾರುಕಟ್ಟೆಯ ಮಾಹಿತಿ ನೀಡಬೇಕು. ರಾಗಿ, ಮುಸುಕಿನ ಜೋಳ, ಕಬ್ಬು, ಭತ್ತದ ನೂತನ ತಳಿಗಳು, ರಸಗೊಬ್ಬರ, ಪೋಷಕಾಂಶಗಳ ಬಗ್ಗೆಯೂ ತಿಳಿವಳಿಕೆ ಮೂಡಿಸಬೇಕು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ಮಹಿಳೆಯರ ಮೇಲೆ ವಿಶ್ವಾಸವಿಟ್ಟು ಸರ್ಕಾರ ಎಲ್ಲ ಯೋಜನೆಗಳನ್ನು ಕೆಳಸ್ತರಕ್ಕೆ ತಲುಪಿಸಲು ಮುಂದಾಗಿದೆ. ಇಡೀ ಸಂಸಾರದ ಜವಾಬ್ದಾರಿ ನಿರ್ವಹಿಸುವ ಮಹಿಳೆಯರು ಈ ಹೊಣೆಯನ್ನೂ ಸಮರ್ಥವಾಗಿ ನಿರ್ವಹಿಸಿ, ರೈತರ ಆರ್ಥಿಕ ಬೆಳವಣಿಗೆಗೆ ಕಾರಣರಾಗಬೇಕು ಎಂದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ.ಬಿ.ಎಚ್.ಯೋಗೇಶ್, ಮಂಡ್ಯದ ಸಹಾಯಕ ಪ್ರಾಧ್ಯಾಪಕ ಡಾ.ಜೆ. ಮಹದೇವ ಇತರರಿದ್ದರು.