

ವೇಮಗಲ್ : ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಕೋಲಾರ ಜಿಲ್ಲೆಗೆ ವಿಶೇಷ ಅನುದಾನ ನೀಡುವಂತೆ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ಒತ್ತಾಯಿಸಿದ್ದಾರೆ.
ಎತ್ತಿನಹೊಳೆಗೆ ಈಗಾಗಲೇ ಕೋಟ್ಯಂತರ ರೂ. ರ್ಖಚಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭವಾದ ಯೋಜನೆ ಪೂರ್ಣಗೊಳಿಸಬೇಕು. ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಿದರೆ ಜ್ವಲಂತ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು. ಮುಖ್ಯವಾಗಿ ವ್ಯವಸಾಯೋತ್ಪನ್ನಕ್ಕೆ ಗಮನಹರಿಸಿ, ಮೂರು ಜಿಲ್ಲೆಗಳ ರೈತರ ಬೆಳೆಗಳಿಗೆ ಒತ್ತು ನೀಡುತ್ತಾ, ಮಾರುಕಟ್ಟೆ ವ್ಯವಸ್ಥೆ, ಉತ್ತಮ ಬೆಲೆ ಇರುವಂತೆ ಕ್ರಮ ಕೈಗೊಳ್ಳಬೇಕಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆ ಜಾರಿಗೊಳಿಸಬೇಕು. ಪ್ರತಿ ಬಾರಿಯೂ ಎಸ್ಸಿ&ಎಸ್ಟಿ ಸಮು ದಾಯಕ್ಕೆ ಇಂತಿಷ್ಟು ಅನುದಾನ ಮಿಸಲಿಡಲಾಗುತ್ತಿದೆಯಾದರೂ ಅದು ಸಂಪೂರ್ಣ ಪ್ರಮಾಣದಲ್ಲಿ ಸಮುದಾಯಕ್ಕೆ ತಲುಪುತ್ತಿಲ್ಲ. ಈ ಬಾರಿ ಅನುದಾನ ತಲುಪಲು ಪರ್ಯಾಯ ವ್ಯವಸ್ಥೆ ಸೃಷ್ಟಿಸಬೇಕು ಎಂದರು.
ವಿಶ್ವಾಸ ಉಳಿಸಿಕೊಳ್ಳಲಿ: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎನ್ನುವ 6 ತಿಂಗಳ ಮೊದಲೇ ನಾನು ಮತ್ತು ಎಂಎಲ್ಸಿ ಅನಿಲ್ಕುಮಾರ್, ನಜೀರ್ ಅಹ್ಮದ್ ಅವರು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ರಾಜ್ಯದಲ್ಲಿ ಗದ್ದುಗೆ ಹಿಡಿದರೆ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೊರ ವರ್ತುಲ ರಸ್ತೆ, ಎಪಿಎಂಸಿ ಸುಧಾರಣೆ, ಮಹಾನಗರ ಪಾಲಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು. ಭರವಸೆಯಂತೆ ಜನರ ನಂಬಿಕೆ ಉಳಿಸಿಕೊಳ್ಳಲು ಮನವಿ ಮಾಡಿದರು.
ವೇಮಗಲ್ ತಾಲೂಕು ಕೇಂದ್ರವಾಗಲಿ: ಕೈಗಾರಿಕಾ ಪ್ರದೇಶವಾಗಿ ಬೆಳೆದಿರುವ ವೇಮಗಲ್&ಕುರುಕಲ್ ಪಟ್ಟಣ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಈ ಬಾರಿಯ ಬಜೆಟ್ನಲ್ಲಿ ಅನುದಾನ ಮೀಸಲಿರಿಸಬೇಕು. ಈ ಭಾಗದ ಸಚಿವರಾದ ಕೃಷ್ಣಭೈರೇಗೌಡರು ಇದಕ್ಕೆ ಹೆಚ್ಚಿನ ಆಸಕ್ತಿವಹಿಸಬೇಕು. ನನೆಗುದಿಗೆ ಬಿದ್ದಿರುವ ಚುನಾವಣಾ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಿ ಅಧಿಕಾರ ವಿಕೇಂದ್ರಿಕರಣಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದ್ದಾರೆ.