ಮಕ್ಕಳ ಕಲೆಗೆ ವೇದಿಕೆ ಸೃಷ್ಟಿಯಾಗಲಿ

12 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಲ್ಲಿ ಅಡಗಿರುವ ಅದ್ಭುತ ಕಲೆ ಬೆಳಕಿಗೆ ಬರುವುದೇ ಅವರಿಗೆ ವೇದಿಕೆ ಅವಕಾಶ ಸಿಕ್ಕಾಗ ಮಾತ್ರ. ಅದಕ್ಕಾಗಿ ಮಕ್ಕಳಿಗೆ ಹೆಚ್ಚು ಹೆಚ್ಚು ವೇದಿಕೆಗಳನ್ನು ಸೃಷ್ಟಿಮಾಡಿ ದೊರಕುವಂತೆ ಮಾಡಬೇಕು ಎಂದು ಮಕ್ಕಳ ಕವಿ ನಿಂಗಣ್ಣ ಕುಂಟಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶುಕ್ರವಾರ ಆಯೋಜಿಸಿದ್ದ ಮಕ್ಕಳ ರಾಜ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚರಂತಯ್ಯ ಹಿರೇಮಠರ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ರಾಜ್ಯೋತ್ಸವ ಸಂಭ್ರಮವನ್ನು ಮಕ್ಕಳೂ ಅನುಭವಿಸುವಂತೆ ಮಾಡಿದ್ದು ಮಾದರಿ. ಮಕ್ಕಳಿಂದ ನೃತ್ಯ, ಸಂಗೀತ, ಯಕ್ಷಗಾನ, ಕಥಾ ವಿಮರ್ಶೆ ಹೀಗೆ ಭಿನ್ನವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಭಿನಂದನೀಯ ಎಂದರು.
ಮಕ್ಕಳ ಸಾಹಿತಿ ಆನಂದ ಪಾಟೀಲ ಮಾತನಾಡಿ, ಚರಂತಯ್ಯ ಹಿರೇಮಠರ ಕಲಾಕೃತಿಗಳು ಸೆಳೆತದಿಂದ ಹಿಡಿದಿಡುವ ಗ್ರಾಮೀಣ ಖನಿಯನ್ನು, ಅಲ್ಲಿನ ಜೀವನದ ಅನುಬಂಧವನ್ನು ಒಡಲಲ್ಲಿಟ್ಟುಕೊಂಡಂತಿವೆ. ಕಲಾ ವಿಮರ್ಶಕರು ಇಂತಹವುಗಳ ಕುರಿತು ಬರೆದು, ಮಾತನಾಡಿ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ ನೀಡಬೇಕು ಎಂದರು.
ನಿವೃತ್ತ ಗ್ರಂಥಪಾಲಕ ಜಿ. ಬಿ. ಹೊಂಬಳ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಿವೇದಿತಾ, ವನಿತಾ, ಆರ್‌ಎಲ್‌ಎಸ್, ಗುಬ್ಬಚ್ಚಿಗೂಡು ಶಾಲೆ, ಸರ್ಕಾರಿ ಶಾಲೆ ಹಾಗೂ ಹಂಗರಕಿ ಮಕ್ಕಳು ಕಥಾ ಪುಸ್ತಕಗಳ ವಿಮರ್ಶೆ ನಡಿಸಿಕೊಟ್ಟರು.
ಶಂಕರ ಹಲಗತ್ತಿ ಸ್ವಾಗತಿಸಿದರು. ಪ್ರಮಿಳಾ ಜಕ್ಕಣ್ಣವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net