

ಕುಂದಗೋಳ: ಹಿಂದು ಸಾದರ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅಗತ್ಯವಿರುವ 2ಎ ಜಾತಿ ಪ್ರಮಾಣಪತ್ರ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದನ್ನು ವಿರೋಧಿಸಿ ಸಮಾಜದ ಮುಖಂಡರು ಸೋಮವಾರ ತಹಸೀಲ್ದಾರ್ ಅವರನ್ನು ಭೇಟಿಯಾಗಿ, ಈ ಹಿಂದೆ ನೀಡುತ್ತಿದ್ದಂತೆಯೇ ಪ್ರಮಾಣಪತ್ರ ವಿತರಣೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಯಿತು. ಸಮಾಜದ ಹಿರಿಯ ಡಿ.ಜೆ. ಪಾಟೀಲ ಮಾತನಾಡಿ, ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಾಜದವರು ಒಗ್ಗಟ್ಟಿನಿಂದ ಮುನ್ನಡೆದರೆ ಮಾತ್ರ ಪ್ರಗತಿ ಸಾಧ್ಯ ಎಂದರು.
ಪ್ರಮಾಣಪತ್ರ ಪಡೆಯುವಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ತಹಸೀಲ್ದಾರ್ ಅವರನ್ನು ಭೇಟಿಯಾಗಿ ರ್ಚಚಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿದ ಮುಖಂಡರು, ಪ್ರಮಾಣಪತ್ರ ಇಲ್ಲದೆ ಮಕ್ಕಳ ವ್ಯಾಸಂಗಕ್ಕೆ ತೀವ್ರ ಅನಾನುಕೂಲವಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಮನವಿ ಆಲಿಸಿದ ತಹಸೀಲ್ದಾರ್ ರಾಜು ಮಾವರಕರ, ಸರ್ಕಾರದ ನಿಯಮಗಳ ಪ್ರಕಾರ ಪರಿಶೀಲಿಸಿ ಪ್ರಮಾಣಪತ್ರ ವಿತರಿಸಲಾಗುವುದು. ಹಿಂದಿನ ಸಮಸ್ಯೆಗಳು ಪುನರಾವರ್ತನೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಹನಮಂತಗೌಡ್ರ ಪಾಟೀಲ, ಎಸ್.ಎಫ್. ಬೆಂಗೇರಿ, ದಾನಪ್ಪ ಗಂಗಾಯಿ, ವಕೀಲರಾದ ಯು.ಎಂ. ಪಾಟೀಲ, ಐ.ಬಿ. ಬೆಟದೂರ, ಎನ್.ಎನ್. ಪಾಟೀಲ, ವೆಂಕನಗೌಡ ಪಾಟೀಲ, ಈಶ್ವರಪ್ಪ ಗಂಗಾಯಿ, ಬಸವರಾಜ ಕೊಪ್ಪದ, ಮಲ್ಲಿಕಾರ್ಜುನ ಕಿರೇಸೂರ, ಮಲ್ಲಿಕಾರ್ಜುನ ಪಾಟೀಲ, ತೋಟಪ್ಪಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಪ್ರಕಾಶ ಸೊರಟಿ, ಯು.ಸಿ. ಪಾಟೀಲ, ರಾಜುಗೌಡ ಪಾಟೀಲ ಇತರರಿದ್ದರು.