ಬದುಕಿಗೆ ಅನುಭವದ ಪಾಠ ಮುಖ್ಯ: ಲೇಖಕ ಚಿದಾನಂದ ಸಾಲಿ ಬಣ್ಣನೆ

44
Published on

ಮೈಸೂರು: ಅನುಭವದ ಸ್ಪರ್ಶಕ್ಕೆ ಸಿಲುಕಿದ ಯಾವ ಕಲ್ಲೂ ಸಹ ಗೌಣವಾಗಲಾರದು. ಉಳಿ ಪೆಟ್ಟು ಹೆಚ್ಚು ಪಡೆದ ಶಿಲೆ ಗರ್ಭ ಗುಡಿ ಸೇರಿದರೆ ಕಡಿಮೆ ಪೆಟ್ಟು ಪಡೆದ ಶಿಲೆ ಮೆಟ್ಟಿಲುಗಳಾಗಬಹುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯರಾದ ಲೇಖಕ ಚಿದಾನಂದ ಸಾಲಿ ಬಣ್ಣಿಸಿದರು.

ವೀ- ಕೇರ್ ಸಂಸ್ಥೆಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ತಿಂಗಳ ಪುಸ್ತಕ ಓದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮೂರ್ತಿಯನ್ನು ರಕ್ಷಿಸುವ ಗುಡಿಯು ಭಾಗವಾಗಬಹುದು. ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವಿದೆ. ತನ್ನದೇ ಆದ ಜವಾಬ್ದಾರಿಯನ್ನು ಮೆರೆಯುತ್ತದೆ. ಇಲ್ಲಿ ಯಾವುದೂ ಮುಖ್ಯವಲ್ಲ, ಅಮುಖ್ಯವೂ ಅಲ್ಲ. ಆದರೆ ಎಳೆಯ ವಯಸ್ಸಿನಲ್ಲಿ ಅನುಭವದ ಉಳಿ, ಸುತ್ತಿಗೆಯ ಏಟಿಗೆ ಅರ್ಪಿಸಿಕೊಳ್ಳುವುದು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.

ವಿ ಕೇರ್ ಸಂಸ್ಥೆ ಸಂಸ್ಥಾಪಕಿ ಡಾ.ಕುಮುದಿನಿ ಅಚ್ಚಿ ಮಾತನಾಡಿ, ಜನಪದರಿಂದ ಕಥೆಗಳು ಪ್ರಾರಂಭಗೊಂಡು ಇಂದು ಅವು ಅಕ್ಷರ ಸಂಸ್ಕೃತಿಯ ಉತ್ಪನ್ನಗಳಾಗಿವೆ. ಜೀವನಾನುಭವದ ಸೆಲೆಯಲ್ಲಿ ಕಥೆಗಳನ್ನು ಕಟ್ಟಿ ಹೇಳುತ್ತಾ, ನಾಟಕ, ಹಾಡುಗಳ ರೂಪಕ್ಕೆ ತರುತ್ತಾ ಸಮುದಾಯಕ್ಕೆ ಅದನ್ನು ಪಸರಿಸುವ ಕಾಯಕಕ್ಕೆ ಜನಪದರು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದರು. ಹಾಗಾಗಿ ಕೆಲವರ ಅನುಭವ, ನೋವು, ನಲಿವು, ಜ್ಞಾನ ಎಲ್ಲರ ಆಸ್ತಿಯಾಗಿ ಮಾರ್ಪಾಡಾಗುತ್ತಿತ್ತು ಎಂದು ಹೇಳಿದರು.

ಪುಸ್ತಕ ಓದಿನಲ್ಲಿ ಪೂರ್ಣ ಚಂದ್ರ ತೇಜಸ್ವಿ ಅವರ ಪರಿಸರದ ಕತೆಯ ಎರಡು ಕಥೆಗಳನ್ನು ವೈದ್ಯೆ ಡಾ.ರಮ್ಯಾ, ಲೇಖಕ ತ್ರಿಪುರಾಂತಕ, ಒಡನಾಡಿ ಲಲಿತಾ ಅವರು ಮಂಡಿಸಿದರು. ಪ್ರೊ.ಪ್ರಸನ್ನ ಸಂತೆಕಡೂರ್ ಅವರ ಬಾಲಕ ಮತ್ತು ಕಾರಂತಜ್ಜ ಕಥೆಯನ್ನು ಯುವ ರಂಗಕರ್ಮಿ ಚಂದ್ರು ಮಂಡ್ಯ ಅವರು ಓದಿದರು.

ಹೋರಾಟಗಾರ ಅಯ್ಯಪ್ಪ ಹೂಗಾರ ಅವರು ಚಿದಾನಂದ ಸಾಲಿ ಅವರನ್ನು ಸನ್ಮಾನಿಸಿದರು. ಗುಡ್‌ವಿಶ್ ಕಾರ್ಯಕರ್ತೆ ಸರಸ್ವತಿ, ವೀಕೇರ್ ಸಂಘಟಕಿ ಸಿಂಚನ, ಒಡನಾಡಿ ಸ್ಟಾೃನ್ಲಿ, ಅಭಿವೃದ್ಧಿ ಚಿಂತಕ ಅಣ್ಣಾರಾಯ, ಉಪನ್ಯಾಸಕ ಪ್ರಶಾಂತ್, ಮೂಡಿಗೆರೆ ಗೋಪಾಲ್, ವೀ ಕೇರ್ ಸಂಸ್ಥೆಯ ಧರ್ಮದರ್ಶಿಗಳಾದ ಶೋಭಾ, ಡಾ.ಸಾರಿಕಾ ಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net