

ಹಾನಗಲ್ಲ: ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ವರ್ಷಗಳಿಂದ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ಮಳೆಗಾಲ ಶುರುವಾಗಿರುವುದರಿಂದ ವಿದ್ಯಾರ್ಥಿಗಳು ಆತಂಕಗೊಳ್ಳುವಂತಾಗಿದೆ.
ಶಾಲೆಯಲ್ಲಿ 500ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ತಾಲೂಕು ಕೇಂದ್ರವಾಗಿದ್ದರಿಂದ ಹಾಗೂ ಶಾಲೆಯ ಸಮೀಪವೇ ಐದಾರು ಹಿಂದುಳಿದ ವರ್ಗ ಗಳ ವಿದ್ಯಾರ್ಥಿಗಳ ಸರ್ಕಾರಿ ವಸತಿ ನಿಲಯಗಳಿವೆ.
ಈ ವಿದ್ಯಾರ್ಥಿಗಳೆಲ್ಲರೂ ಅನಿವಾರ್ಯ ವಾಗಿ ಇದೇ ಶಾಲೆ ಅವಲಂಬಿಸಿದ್ದಾರೆ. ಶತಮಾನ ಕಂಡಿರುವ ಶಾಲೆ ಸ್ಮಾರಕದ ರೀತಿಯಲ್ಲಿ ಅಭಿವೃದ್ಧಿ ಕಾಣಬೇಕಿತ್ತು. ಆದರೆ, ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳ ಅವಕೃಪೆಯಿಂದಾಗಿ ಶಿಥಿಲಾವಸ್ಥೆಗೆ ತಲುಪುತ್ತಿವೆ.
ಈ ಹಿಂದೆ ಕೊಠಡಿಗಳ ಮೇಲ್ಛಾಣಿಯ ಹೆಂಚು ತೆಗೆದು ಶೀಟ್ ಹಾಕಲಾಗಿತ್ತು. ನಂತರ ಮಳೆ ಹನಿಗಳ ಶಬ್ದದಿಂದ ಪಾಠಗಳು ಕೇಳಿಸದಂತಾಯಿತು. ಇತ್ತೀಚೆಗೆ ಬೀಸಿದ ಗಾಳಿಗೆ ಶೀಟ್‌ಗಳು ಹಾರಿ ಹೋಗಿದ್ದವು.
ಈ ಹಿನ್ನೆಲೆಯಲ್ಲಿ ಸರ್ಕಾರ 8 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಇದೀಗ ಮತ್ತೆ ಶೀಟ್‌ಗಳನ್ನು ತೆಗೆದು ಹೆಂಚು ಹೊದಿಸಲಾಗುತ್ತಿದೆ. ಮಳೆಗಾಲಕ್ಕೂ ಪೂರ್ವದಲ್ಲೇ ಕಾಮಗಾರಿ ಆರಂಭಿಸಿದ್ದರೆ, ವಿದ್ಯಾರ್ಥಿಗಳು ತೊಂದರೆ ಅನುಭವಿಸುವ ಸಂದರ್ಭ ಬರುತ್ತಿರಲಿಲ್ಲ.
ಜೂನ್ ಮೊದಲ ವಾರದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಹೀಗಾಗಿ ಕೆಲವು ಕೊಠಡಿಗಳಿಗೆ ಹೆಂಚುಗಳನ್ನು ಹೊದಿಸಲು ಸಾಧ್ಯವಾಗಿಲ್ಲ. ಹೆಂಚು ಹೊದಿಸಿದ ಕೊಠಡಿಗಳಲ್ಲೂ ಅಲ್ಲಲ್ಲಿ ಸೋರುತ್ತಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.
500 ವಿದ್ಯಾರ್ಥಿಗಳಿಗೆ ಕನಿಷ್ಠ 13 ಕೊಠಡಿಗಳ ಅಗತ್ಯವಿದ್ದು, ಈಗ ಕೇವಲ 8 ಕೊಠಡಿ ಮಾತ್ರ ಲಭ್ಯವಿವೆ. ಇದರ ಮಧ್ಯೆ ಆಂಗ್ಲ ಮಾಧ್ಯಮ ವಿದ್ಯಾರ್ಥಿ ಗಳಿಗೆ ಸೋರುತ್ತಿರುವ ಕೊಠಡಿಗಳಲ್ಲೇ ಪಾಠ ನಡೆಸಲಾಗುತ್ತಿದೆ.
ಕಳೆದ 4 ವರ್ಷಗಳಿಂದ ಶಾಲೆಯ ಆವರಣ ಮಳೆಗಾಲದ ಸಮಯದಲ್ಲಿ ಕೆಸರುಗದ್ದೆಯಾಗುತ್ತದೆ. ಇದನ್ನು ಸರಿಪಡಿಸಲು ಯಾರೂ ಮುಂದಾಗುತ್ತಿಲ್ಲ. ಕೆಸರಿನಲ್ಲೇ ವಿದ್ಯಾರ್ಥಿಗಳು ಓಡಾಡುವ ಸ್ಥಿತಿಯಿದೆ. ಹೀಗಾಗಿ ಆಟೋಟಗಳಿಗೆ ಪೂರ್ಣವಿರಾಮ ಹಾಕಲಾಗಿದೆ. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಶೌಚಗೃಹಗಳೂ ವ್ಯವಸ್ಥಿತವಾಗಿಲ್ಲ. ಶೌಚದ ಕೊಳಚೆ ದಾರಿಗುಂಟ ಹರಿದು ಬರುತ್ತದೆ. ಈ ಎಲ್ಲ ಸಮಸ್ಯೆಗಳಿಂದಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಪಾಲಕರು ಹಿಂಜರಿಯುವಂತಾಗಿದೆ.
ಶಾಸಕರ ಮಾದರಿ ಸರ್ಕಾರಿ ಶಾಲೆ ಕಟ್ಟಡ ಹಳೆಯದ್ದಾಗಿದ್ದು, ಅಲ್ಲಲ್ಲಿ ಶಿಥಿಲಗೊಂಡಿದೆ. ಪರ್ಯಾಯ ಕಟ್ಟಡ ನಿರ್ಮಾಣದ ವ್ಯವಸ್ಥೆ ಕೈಗೊಳ್ಳಬೇಕಿದೆ. ಇದಕ್ಕೆ ದೊಡ್ಡ ಮಟ್ಟದ ಅನುದಾನದ ಅಗತ್ಯವಿದೆ.ವಿ.ವಿ. ಸಾಲಿಮಠ ಬಿಇಒ ಹಾನಗಲ್ಲ ಶಾಲೆ ಅಭಿವೃದ್ಧಿಗೊಳಿಸಲು ಶಾಸಕರು ವಿಶೇಷ ಅನುದಾನ ತರುವುದು ಅನಿವಾರ್ಯವಾಗಿದೆ. ಬಡವರ ಮಕ್ಕಳು ಕಲಿಯುವ ಇಂಥ ಶಾಲೆಗಳ ಬಗ್ಗೆ ಸರ್ಕಾರ ಅನಾದರ ತೋರಬಾರದು. 4 ವರ್ಷಗಳಿಂದಲೂ ನಡೆದ ಹೋರಾಟಗಳಿಗೆ ಸರ್ಕಾರ ಕಣ್ತೆರೆಯುತ್ತಿಲ್ಲ. ಶಾಲೆ ದುರಸ್ತಿಗೊಳ್ಳುವವರೆಗೆ ಮಕ್ಕಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸುವ ಅಗತ್ಯವಿದೆ.ಪ್ರಶಾಂತ ಮುಚ್ಚಂಡಿ ಪೋಷಕ