

ಬೂದಿಕೋಟೆ: ಬಂಗಾರಪೇಟೆ ತಾಲೂಕು ಒಂಬತ್ತುಗುಳಿ ಗ್ರಾಮದ ಅಂಗನವಾಡಿ ಕಟ್ಟಡದ ನಿಮಾರ್ಣ ಕಾರ್ಯ ಅರ್ಧಕ್ಕೆ ನಿಂತಿದ್ದು, ಕಾಮಗಾರಿ ಪೂರ್ಣಗೊಳ್ಳದ ಕಾರಣ ಮಕ್ಕಳು ಶಿಥಿಲಗೊಂಡಿರುವ ಸರ್ಕಾರಿ ಶಾಲಾ ಕೊಠಡಿಯಲ್ಲಿ ಜೀವಭಯದಲ್ಲಿ ಕಾಲದೂಡುವಂತಾಗಿದೆ.
ಬಂಗಾರಪೇಟೆ ತಾಲೂಕು ಐನೋರಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂಬತ್ತುಗುಳಿ ಗ್ರಾಮದಲ್ಲಿ ಈ ಹಿಂದೆ ಇದ್ದ ಅಂಗನವಾಡಿ ಕೇಂದ್ರ ಶಿಥಿಲಗೊಂಡಿತ್ತು. ಅದರಲ್ಲಿ ಮಕ್ಕಳ ಕಲಿಕೆಗೆ ಸಾಧ್ಯವಿಲ್ಲ ಎಂದು ಅರಿತ ಅಧಿಕಾರಿಗಳು 2024ರ ಫೆಬ್ರವರಿಯಲ್ಲಿ ಕಟ್ಟಡ ಕೆಡವಿ, ಮಕ್ಕಳನ್ನು ಸರ್ಕಾರಿ ಶಾಲೆಯ ಕೊಠಡಿಯೊಂದಕ್ಕೆ ಸ್ಥಳಾಂತರಿಸಿದರು. ಅದೇ ತಿಂಗಳಿನಲ್ಲೇ ಪಂಚಾಯಿತಿಯ ನರೇಗಾ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅನುದಾನ ಸೇರಿ ಒಟ್ಟು 13 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಕಾಮಗಾರಿ ಆರಂಭಿಸಿದರು.
ಲೋಕಸಭಾ ಚುನಾವಣೆಗೂ ಮುಂಚೆಯೇ ಕಾಮಗಾರಿ ನಿಲ್ಲಿಸಲಾಗಿದೆ. ಅಷ್ಟೋತ್ತಿಗೆ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಅರ್ಧಕ್ಕೆ ಬಂದಿತ್ತು. ಈಗ ಚುನಾವಣೆ ಮುಗಿದು ಸುಮಾರು 5 ತಿಂಗಳು ಆದರೂ ಕಾಮಗಾರಿ ಆರಂಭಿಸಿಲ್ಲ. ಸದ್ಯ ಮಕ್ಕಳು ಕಲಿಯುತ್ತಿರುವ ಶಿಥಿಲ ಕಟ್ಟಡವೂ ಮಳೆ ಬಂದರೆ ಸೋರುತ್ತಿದೆ. ಇಂದೋ ನಾಳೆಯೋ ಬೀಳುವ ಹಂತದಲ್ಲಿರು ಹಾಗೂ ಬಿರುಕು ಬಿಟ್ಟಿರುವ ಕಟ್ಟಡದಲ್ಲಿ ಪುಟ್ಟ ಮಕ್ಕಳು ಪ್ರಾಣಭಯದಲ್ಲಿ ಕಾಲ ಕಳೆಯುವಂತಾಗಿದೆ. ಕೇಂದ್ರದಲ್ಲಿ ಪ್ರಸ್ತುತ 11 ಮಕ್ಕಳು, ಮೂವರು ಗರ್ಭಿಣಿಯರು ಮತ್ತು ನಾಲ್ವರು ಬಾಣಂತಿಯರು ನೋಂದಣಿಯಾಗಿದ್ದಾರೆ. ಗರ್ಭಿಣಿಯರು ಮತ್ತು ಬಾಣಂತಿಯರು ತಿಂಗಳಿಗೊಮ್ಮೆ ದಿನಸಿ ಸಾಮಾಗ್ರಿಗಳನ್ನು ಪಡೆದು ಹೋಗುತ್ತಾರೆ. ಆದರೆ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೂ ಮಕ್ಕಳು ಇದೇ ಕೊಠಡಿಯಲ್ಲಿ ಪೌಷ್ಠಿಕ ಆಹಾರ ಸೇವಿಸುತ್ತಾ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯಬೇಕಿದೆ. ಆದ್ದರಿಂದ ಅರ್ಧಕ್ಕೆ ನಿಂತ ಕಾಮಗಾರಿಯನ್ನು ಕೂಡಲೇ ಆರಂಭಿಸಿ ಶೀಘ್ರ ಮಕ್ಕಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಕಾಮಗಾರಿ ಆರಂಭಿಸಲು ವಿಳಂಭವಾದರೆ ಬಾಡಿಗೆ ಕಟ್ಟಡವನ್ನಾದರೂ ಪಡೆದು ಮಕ್ಕಳನ್ನು ಸ್ಥಳಾಂತರಿಸಬೇಕು ಎಂಬುದು ಪಾಲಕರ ಒತ್ತಾಯ.
ಒಂಬತ್ತುಗುಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ನಿಮಾರ್ಣಕ್ಕೆ ಕಳೆದ ಸಾಲಿನಲ್ಲಿ ಕ್ರಿಯಾ ಯೋಜನೆ ರೂಪಿಸಿರಲಿಲ್ಲ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಇದ್ದಂತಹ ಅನುದಾನದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಸಾಲಿನಲ್ಲಿ ಪಂಚಾಯಿತಿಯಿಂದ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಕ್ರಿಯಾ ಯೋಜನೆ ಅನುಮೋದನೆಗೊಂಡು ಅನುದಾನ ಬಿಡುಗಡೆಯಾದ ಕೂಡಲೇ ಬಾಕಿ ಇರುವಂತಹ ಕಾಮಗಾರಿ ನರೇಗಾ ಯೋಜನೆಯ ಮೂಲಕ ಪೂರ್ಣಗೊಳಿಸಲಾಗುತ್ತದೆ.
ಯಶವಂತ್ ಪಿಡಿಒ ಐನೋರಹೊಸಹಳ್ಳಿ
ನರೇಗಾ ಯೋಜನೆಯಿಂದ 7 ಲಕ್ಷ ರೂ. ಮತ್ತು ನಮ್ಮ ಇಲಾಖೆಯ 5 ಲಕ್ಷ ರೂ. ಅನುದಾನದೊಂದಿಗೆ ನೂತನ ಕಟ್ಟಡ ನಿರ್ಮಿಸಲು ಕಾಮಗಾರಿ ಆರಂಭಿಸಲಾಗಿತ್ತು. ಇಲಾಖೆಯಿಂದ ಬಿಡುಗಡೆಯಾದ 5 ಲಕ್ಷ ರೂ. ವೆಚ್ಚದಲ್ಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟಕ್ಕೆ ಕಟ್ಟಡ ಕಾಮಗಾರಿ ಮಾಡಲಾಗಿದೆ. ಪಂಚಾಯಿತಿಯಿಂದ ಅನುದಾನ ಬಿಡುಗಡೆಯಾಗದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೂ ಮಕ್ಕಳನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ.
ಮುನಿರಾಜು ಸಿಡಿಪಿಒ ಬಂಗಾರಪೇಟೆ