

ಕುಷ್ಟಗಿ: ಪೌಷ್ಟಿಕ ಆಹಾರ ಸೇವನೆಯಿಂದ ರಕ್ತಹೀನತೆ ಹಾಗೂ ಇತರ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯ ಎಂದು ಪಟ್ಟಣದ ನಮ್ಮ ಕ್ಲಿನಿಕ್‌ನ ಸಮುದಾಯ ಆರೋಗ್ಯಾಧಿಕಾರಿ ಐಶ್ವರ್ಯ ಕಾಳೆ ಹೇಳಿದರು.
ಪಟ್ಟಣದ ಅಂಗನವಾಡಿ 26ನೇ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ಜನಿಸುವ ಮಗು ಸಹ ಆರೋಗ್ಯವಾಗಿರುತ್ತದೆ. ಮಗುವಿನ ಆರೈಕೆ ವೇಳೆಯೂ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಪೌಷ್ಟಿಕ ಆಹಾರದ ಮಹತ್ವ ತಿಳಿಸಿದರು.
ತಾಲೂಕು ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಚನ್ನಬಸಪ್ಪ ಹನುಮನಾಳ ಎಚ್‌ಐವಿ ಸೋಂಕು ಹರಡುವ ಹಾಗೂ ಮುಂಜಾಗ್ರತೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ನಂತರ ಬಾಣಂತಿಯರಿಗೆ ರಕ್ತಹೀನತೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷಿಸಿ ಸಲಹೆ ನೀಡಲಾಯಿತು. ಅಲ್ಲಿಯೇ ತಯಾರಿಸಿದ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ಉಣಬಡಿಸಲಾಯಿತು.
ಪ್ರಯೋಗಾಲಯ ತಜ್ಞ ಎ.ಎಸ್.ಅಂತರಗಂಗೆ, ಆರೋಗ್ಯ ಸಿಬ್ಬಂದಿ ದಾವಲ್‌ಬಿ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಾದ ಗಂಗಮಾಳಮ್ಮ ಚೂರಿ, ಲಕ್ಷ್ಮೀಕಟ್ಟಿಮನಿ, ಆಶಾ ಕಾರ್ಯಕರ್ತೆಯರಾದ ಚಂಪಾಬಾಯಿ ಶೆಟ್ಟರ್, ಹನುಮವ್ವ ಇತರರಿದ್ದರು.