

ಇಂಡಿ: ಕುಷ್ಠರೋಗ ಶಾಪವಲ್ಲ ಗುಣಪಡಿಸುವ ರೋಗ. ಭಾರತ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಜನರು ಕೆಲವು ಮೂಢನಂಬಿಕೆಯಿಂದ ಹೊರಬರುತ್ತಿಲ್ಲ. ಕುಷ್ಠರೋಗದ ಬಗ್ಗೆ ಹಲವು ಅಪನಂಬಿಕೆಗಳಿದ್ದು, ಅವುಗಳನ್ನು ಹೊಡೆದುಹಾಕಲು ಜನರು ಜಾಗೃತರಾಗಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ ಹೇಳಿದರು.
ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ, ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕುಷ್ಠರೋಗ ಸಾಂಕ್ರಾಮಿಕವಾಗಿದ್ದು, ಪ್ರಾರಂಭದಲ್ಲಿಯೇ ಗುರುತಿಸಿದರೆ ಬಹುವಿಧದ ಔಷಧದ ಮೂಲಕ ಗುಣಪಡಿಸಬಹುದು. ಅದು ಯಾವುದೇ ರೀತಿಯಲ್ಲಿಯೂ ಮಾರಣಾಂತಿಕ ಕಾಯಿಲೆ ಅಲ್ಲ. ಆದರೆ ಯಾವುದೇ ಕಾಯಿಲೆ ಇದ್ದರೂ ನಿರ್ಲಕ್ಷಿಸಬಾರದು. ಕುಷ್ಟರೋಗವು ನಮ್ಮ ದೇಹವನ್ನು ಪ್ರವೇಶಿಸಿದ ಕೆಲವು ತಿಂಗಳು ಅಥವಾ ವರ್ಷದ ನಂತರ ಅದರ ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳಬಹುದು.
ಆರಂಭದಲ್ಲಿ ತಾಮ್ರ ಬಣ್ಣ ಅಥವಾ ತಿಳಿ ಬಿಳಿ ಬಣ್ಣದ ಸ್ಪರ್ಶವಿಲ್ಲದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಇದು ಗಾಯವಾಗಿ ನಂತರ ಹುಣ್ಣಾಗಿ ನಂತರ ಮನುಷ್ಯನ ದೇಹವನ್ನು ವಿಕಾರ ಮಾಡುತ್ತವೆ. ಮೈಕೋಬ್ಯಾಕ್ಟೀರಿಯಾ ಲೆಪ್ರೇ ಎಂಬ ರೋಗಾಣುವಿನಿಂದ ಬರುವ ಈ ರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ ಎಂದು ಹೇಳಿದರು.
ಕುಷ್ಠರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ತಾಲೂಕಿನಾದ್ಯಂತ ಕುಷ್ಠರೋಗ ಪ್ರಕರಣಗಳ ಪತ್ತೆ ಹಚ್ಚುವ ಅಭಿಯಾನಕ್ಕೆ ಎಲ್ಲ ಸಾರ್ವಜನಿಕರು ಸಹಕರಿಸಬೇಕು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿದಾಗ ಸಂಕೋಚಪಡದೆ ರೋಗ ಪತ್ತೆ ಅಭಿಯಾನಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ತಜ್ಞ ವೈದ್ಯರಿಂದ ಪ್ರಕರಣಗಳನ್ನು ದೃಢಪಡಿಸಿ ಉಚಿತ ಔಷಧ, ಚಿಕಿತ್ಸೆ ಪಡೆಯಬೇಕು. 2025ರೊಳಗೆ ಕುಷ್ಠರೋಗ ಮುಕ್ತ ದೇಶ ನಿರ್ಮಾಣ ಮಾಡುವುದಕ್ಕೆ ಸಂಕಲ್ಪ ಮಾಡಿದ್ದು, ತಾಲೂಕಿನ ನಾಗರಿಕರು ಕೈಜೋಡಿಸಬೇಕು ಎಂದು ಹೇಳಿದರು.
ಡಾ.ಪ್ರತೀಕ ಪಾಟೀಲ, ಡಾ.ಈಶ್ವರ ಪಟೇದ, ತಾಲೂಕು ಕ್ಷೇತ್ರ ಆರೋಗ್ಯಾಧಿಕಾರಿ ಸುನಂದಾ ಅಂಬಲಗಿ, ವೈ.ಎಂ.ಪೂಜಾರಿ, ಎಸ್.ಎಚ್.ಅತನೂರ, ಚಿಕ್ಕಬೇನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಕಾರ್ಯಾಲಯದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.