

ಕುಷ್ಟಗಿ: ಪಟ್ಟಣದ 7 ಹಾಗೂ 8ನೇ ವಾರ್ಡ್‌ನಲ್ಲಿ ಗುರುವಾರ ಸಂಜೆ ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಬಾಲಕ ಸೇರಿ ಹಲವರು ಗಂಭೀರ ಗಾಯಗೊಂಡಿದ್ದಾರೆ. ಬಾಲಕನ ಕೆನ್ನೆ ಹಾಗೂ ಕಾಲಿಗೆ ಕಚ್ಚಿರುವ ನಾಯಿ, ಮನಬಂದಂತೆ ದಾಳಿ ನಡೆಸಿದೆ.
ಗಾಯಾಳುಗಳಿಗೆ ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪುರಸಭೆ ರಸ್ತೆಯಲ್ಲಿ ಸಾಲು ಸಾಲು ತಲೆ ಎತ್ತಿರುವ ಚಿಕನ್ ಸೆಂಟರ್‌ಗಳ ಸುತ್ತ ಸುಳಿದಾಡುವ ನಾಯಿಗಳು, ಮಾಂಸದಾಸೆಗೆ ಪರಸ್ಪರ ಕಚ್ಚಾಡುತ್ತ ರಸ್ತೆಗೆ ಬರುತ್ತಿವೆ. ಹೀಗೆ ಬರುವ ನಾಯಿಗಳು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಅಪಘಾತಗಳು ಸಂಭವಿಸುತ್ತಿವೆ. ಇನ್ನೂ ಕೆಲ ನಾಯಿಗಳು ದಾರಿಹೋಕರಿಗೆ ಕಚ್ಚುತ್ತಿದ್ದು, ಮಾಂಸದ ರುಚಿ ಕಂಡ ನಾಯಿಯಿಂದಲೇ ಈ ಅವಘಡ ಸಂಭವಿಸಿದೆ. ಈ ಸಂಬಂಧ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.