ಸತ್ತವರ ಹೆಸರಿನಲ್ಲಿ ಕಾಂಚಾಣ ಕುಣಿತ !

23kst-1
Published on

ಕುಷ್ಟಗಿ: ಇಲ್ಲಿನ ಕಂದಾಯ ಇಲಾಖೆಯಲ್ಲಿ ಹಣ ನೀಡದಿದ್ದರೆ ಕೆಲಸ ಆಗುವುದಿಲ್ಲ. ಅಲ್ಲದೆ, ಅಧಿಕಾರಿಗಳು ಮಧ್ಯವರ್ತಿಗಳಿಗೆ ಮಣೆ ಹಾಕುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕುಟುಂಬ ಸದಸ್ಯರನ್ನು ಕಳೆದುಕೊಂಡ ದುಖದಲ್ಲಿರುವವರಿಂದಲೂ ಹೆಚ್ಚುವರಿ ಹಣ ವಸೂಲಿ ಮಾಡಿ ಜೇಬು ತುಂಬಿಸಿಕೊಳ್ಳುವ ಮೂಲಕ ಜನನ ಮತ್ತು ಮರಣ ನೋಂದಣಿ ವಿಭಾಗದ ಅಧಿಕಾರಿಗಳು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆಂಬ ಜನರು ದೂರುತ್ತಿದ್ದಾರೆ.

ಮಕ್ಕಳ ಜನನ ಪ್ರಮಾಣ ಪತ್ರವನ್ನು ಪಾಲಕರು ಶಾಲಾ ದಾಖಲಾತಿ, ಆಧಾರ್ ನೋಂದಣಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಲ್ಲಿಸಲೇಬೇಕು. ವ್ಯಕ್ತಿ ಮರಣ ಹೊಂದಿದಾಗ ಕುಟುಂಬದವರು ಬ್ಯಾಂಕ್, ಕೋರ್ಟ್ ಇನ್ನಿತರ ಉದ್ದೇಶಕ್ಕಾಗಿ ಪಡೆದುಕೊಳ್ಳಲೇಬೇಕಿದೆ. ಸಣ್ಣ ಪುಟ್ಟ ತಿದ್ದುಪಡಿ ಮಾಡಿಸಿದಾಗಲೂ ಒಂದು ಪ್ರತಿ ಜನರೇಟ್ ಮಾಡಿ ಮುದ್ರಿತ ಪ್ರತಿ ಪಡೆಯಬೇಕಿದೆ. ಈ ಹಿಂದೆ ಪಡೆದ ಮ್ಯಾನುವಲ್ ಪ್ರಮಾಣ ಪತ್ರಗಳ ಡಿಜಿಟಲ್ ಪ್ರತಿ ಪಡೆಯುವ ಅಗತ್ಯವೂ ಇದೆ. ಈ ಎಲ್ಲ ಸಂದರ್ಭಗಳಲ್ಲಿಯೂ ಪಡೆಯುವ ಪ್ರಮಾಣ ಪತ್ರಕ್ಕೆ ಸರ್ಕಾರ 50 ರೂ. ಶುಲ್ಕ ನಿಗದಿ ಮಾಡಿದೆ. ಸಾರ್ವಜನಿಕರ ಅನಿವಾರ್ಯತೆಯ ದುರುಪಯೋಗ ಪಡೆಯುತ್ತಿರುವ ಇಲ್ಲಿನ ಜನನ, ಮರಣ ನೋಂದಣಿ ವಿಭಾಗದ ಅಧಿಕಾರಿ/ಸಿಬ್ಬಂದಿ ಸರ್ಕಾರ ನಿಗದಿ ಮಾಡಿರುವ ಶುಲ್ಕದ ಮೂರ‌್ನಾಲ್ಕು ಪಟ್ಟು ವಸೂಲಿ ಮಾಡುತ್ತಿದ್ದಾರೆ. ಕೋರ್ಟ್‌ಗೆ ಸಲ್ಲಿಸಲು ಪಡೆದ ತಂದೆಯವರ ಮರಣ ಪ್ರಮಾಣ ಪತ್ರಕ್ಕೆ 200 ರೂ. ಶುಲ್ಕ ಪಡೆದರು. ಸರ್ಕಾರ ನಿಗದಿಪಡಿಸಿದ ಶುಲ್ಕವೇ ಇಷ್ಟದೆ ಎಂದು ಸಿಬ್ಬಂದಿ ಹೇಳಿದರೆಂದು ನಮ್ಮ ಪಡಸಾಲೆ(ಜನನ ಮರಣ ನೋಂದಣಿ ವಿಭಾಗ)ಯಿಂದ ಹೊರಬಂದ ಮೃತ ವ್ಯಕ್ತಿಯ ವಾರಸುದಾರರೊಬ್ಬರು ತಿಳಿಸಿದರು.

ಗಾಯದ ಮೇಲೆ ಬರೆ !

ಜನನ, ಮರಣ ಪ್ರಮಾಣ ಪತ್ರಕ್ಕೆ ಈ ಮೊದಲು 5 ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಪ್ರಮಾಣ ಪತ್ರಗಳ ಅನಿವಾರ್ಯತೆ ಹಾಗೂ ಮಹತ್ವ ಮನಗಂಡ ಸರ್ಕಾರ ಕಳೆದ ಫೆಬ್ರವರಿ ತಿಂಗಳಲ್ಲಿ ಶುಲ್ಕವನ್ನು 10 ಪಟ್ಟು ಹೆಚ್ಚಿಸಿದ ಸರ್ಕಾರ ಸಾರ್ವಜನಿಕರ ಹೊರೆ ಹೆಚ್ಚಿಸಿತ್ತು. 10 ಪಟ್ಟು ಹೆಚ್ಚಾದ ಶುಲ್ಕಕ್ಕೆ ಮೂರ‌್ನಾಲ್ಕು ಪಟ್ಟು ಹೆಚ್ಚುವರಿ ಹಣ ಪಡೆಯುತ್ತಿರುವ ಅಧಿಕಾರಿಗಳು ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಮೃತಪಟ್ಟವರ ಕುಟುಂಬ ಸದಸ್ಯರಿಗೆ ಮರಣ ಪ್ರಮಾಣ ಪತ್ರಗಳನ್ನು ಉಚಿತವಾಗಿ ನೀಡಿ ದುಃಖತಪ್ತ ಕುಟಂಬದ ಕಣ್ಣೀರು ಒರೆಸುವ ಕಾರ್ಯ ಮಾಡಬೇಕಾದ ಸರ್ಕಾರ ಸತ್ತವರ ಹೆಸರಿನಲ್ಲಿ ಖಜಾನೆ ತುಂಬಿಸಿಕೊಳ್ಳುವ ಕಾರ್ಯ ಮಾಡುತ್ತಿದೆ. ಇತ್ತ ಸಂಬಂಧಿಸಿದ ಅಧಿಕಾರಿಗಳೂ ಸಹ ಸರ್ಕಾರ ವೇತನ ಇನ್ನಿತರ ಸೌಲಭ್ಯ ನೀಡಿದ್ದಾಗ್ಯೂ ಸತ್ತವರ ಹೆಸರಿನಲ್ಲಿ ಜೇಬು ತುಂಬಿಸಿಕೊಳ್ಳುವ ಕಾರ್ಯ ಮಾಡುತ್ತಿರುವುದು ಅಮಾನವೀಯ ವರ್ತನೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೋಟ್

ಜನನ, ಮರಣ ಪ್ರಮಾಣ ಪತ್ರಗಳಿಗೆ ಸರ್ಕಾರ 50ರೂ. ಶುಲ್ಕ ನಿಗದಿ ಮಾಡಿದೆ. ಇದಕ್ಕಿಂತ ಹೆಚ್ಚು ಪಡೆಯುವಂತಿಲ್ಲ. ಅಧಿಕಾರಿಗಳು ಹೆಚ್ಚು ಹಣ ಕೇಳಿದ್ದಲ್ಲಿ ಕಡ್ಡಾಯವಾಗಿ ರಸೀದಿ ಪಡೆಯಬೇಕು.

ಅಶೋಕ ಶಿಗ್ಗಾವಿ

ಕುಷ್ಟಗಿ ತಹಸೀಲ್ದಾರ್

ಕೋಟ್

ಯಾವುದೇ ಪ್ರಮಾಣ ಪತ್ರಕ್ಕೆ ನಿಗದಿತ ಶುಲ್ಕಕ್ಕಿಂತ ಹೆಚ್ಚು ಪಡೆಯುವಂತಿಲ್ಲ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು.

ದೊಡ್ಡನಗೌಡ ಪಾಟೀಲ್

ಶಾಸಕ ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net