ಬೋನಿಗೆ ಬಿದ್ದ ಮತ್ತೊಂದು ಚಿರತೆ

chirate
Published on

 ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ

ನೆಲಮಂಗಲ ತಾಲೂಕು ಶಿವಗಂಗೆ ಬೆಟ್ಟದ ತಪ್ಪಲಿನ ಮುದ್ದೀರೇಶ್ವರ ಸ್ವಾಮಿ ದೇವಾಲಯದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮತ್ತೊಂದು ಚಿರತೆ ಸೆರೆಯಾಗಿದೆ.

ಸೋಮವಾರ 7 ವರ್ಷದ ಗಂಡು ಚಿರತೆಯೊಂದು ತುಮಕೂರಿನಿಂದ ತರಿಸಿದ್ದ ವಿಶೇಷ ಬೋನಿಗೆ ಸೆರೆಯಾದ ಬೆನ್ನಲ್ಲೆ ಗಂಡು ಚಿರತೆ ಮತ್ತೊಂದು ಬೋನಿನಲ್ಲಿ ಸೆರೆ ಸಿಕ್ಕಿದೆ, ಅರಣ್ಯ ಇಲಾಖೆಯ ಸಿಸಿ ಕ್ಯಾಮರಾದಲ್ಲಿ ಮತ್ತೊಂದು ಗಂಡು ಚಿರತೆ ಚಲನವಲನ ಪತ್ತೆಯಾಗಿದ್ದು ಆ ಗಂಡು ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದಾರೆ.

ಡಿಎನ್‌ಎ ಪರೀಕ್ಷೆಯಾಗಬೇಕು: ಪ್ರಸ್ತುತ ಸಿಕ್ಕಿಬಿದ್ದಿರುವ ಎರಡು ಚಿರತೆಗಳಲ್ಲಿ ಕರಿಯಮ್ಮ ಅವರನ್ನು ಕೊಂದ ಚಿರತೆ ಯಾವುದು ಎಂಬುದು ದೃಢಪಟ್ಟಿಲ್ಲ. ಅತ್ತ ಕಡೆ ಕರಿಯಮ್ಮ ಮರಣೋತ್ತರ ಪರೀಕ್ಷೆ ವರದಿ ಇನ್ನೂ ಇಲಾಖೆ ಕೈಸೇರಿಲ್ಲ. ಇದರಿಂದ ಸೆರೆ ಸಿಕ್ಕಿರುವ ಚಿರತೆಗಳ ಡಿಎನ್‌ಎ ಪರೀಕ್ಷೆಯೂ ತಡವಾಗುತ್ತಿದೆ ಎನ್ನಲಾಗಿದೆ. ಅರಣ್ಯಧಿಕಾರಿಗಳು ಮತ್ತು ವೈದ್ಯರು ಭೇಟಿ ನೀಡಿ, ಸೆರೆಯದ ಚಿರತೆಗೆ ಅರವಳಿಕೆ ನೀಡಿ ರಕ್ತದ ಮಾದರಿ, ಅದರ ಕೂದಲನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಸೆರೆಯಾದ ಹೆಣ್ಣು ಚಿರತೆಯನ್ನು ಬನ್ನೇರಘಟ್ಟ ಜೈವಿಕ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸಿದ್ದಾರೆ. ಕರಿಯಮ್ಮ ಹತ್ಯೆಯಾಗಿ 10 ದಿನ ಕಳೆದರೂ ಇದುವರೆಗೆ ಮರಣೋತ್ತರ ಪರೀಕ್ಷೆ ವರದಿ ತಲುಪಿಲ್ಲದಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಗಣಿಸಿದೆ.

ಹೈನುಗಾರಿಕೆ, ಕೃಷಿಗೆ ತೊಡಕು: ಶಿವಗಂಗೆ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಕಂಬಾಳು ಗೊಲ್ಲರಹಟ್ಟಿ ಗ್ರಾಮದ ಬಳಿ ಚಿರತೆ ಹಾವಳಿ ಹೆಚ್ಚಿರುವುದರಿಂದ ರೈತರು ಜಮೀನುಗಳ ಬಳಿ ಹೋಗಿಬರಲು ಹೆದರುವಂತಾಗಿದೆ, ಹೈನುಗಾರರು ಆತಂಕಕ್ಕೊಳಲಾಗಿದ್ದಾರೆ. ಇಲ್ಲಿ ಸಾಕಷ್ಟು ಜನ ಕೃಷಿ ಮತ್ತು ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡು ದಿನ ದೂಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿರತೆ ಹಾವಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಚಿರತೆಗೆ ಸಾಕಷ್ಟು ಗಾಯ: ಬೋನಿಗೆ ಸೆರೆಯಾದ ಚಿರತೆಗಳು ಗಾಬರಿಗೊಂಡು ಹೊರಬರಲು ತಿಣುಕಾಡಿ ಗಾಯ ಮಾಡಿಕೊಂಡಿವೆ, ಗಂಡು ಚಿರತೆ ಮೂತಿ ಹಾಗೂ ಕಾಲುಗಳಿಗೆ ಗಾಯ ಮಾಡಿಕೊಂಡಿದೆ. ಅದೇ ರೀತಿ ಸೆರೆಯಾದ ಹೆಣ್ಣು ಚಿರತೆ ಮುಖವನ್ನು ಕಿತ್ತುಕೊಂಡಿದ್ದು ಗಾಯದ ಬಾಧೆಗೆ ಮತ್ತಷ್ಟು ವ್ಯಗ್ರಗೊಂಡಿದೆ. ಎರಡನ್ನೂ ಬನ್ನೇರುಘಟ್ಟ ಜೈವಿಕ ಉದ್ಯಾನದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net