

ಮೈಸೂರು; ಆಹಾರ ಅರಸಿ ನಾಡಿಗೆ ಬಂದು ನಾಲೆಯ ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ಚಿರತೆ ಹಾಗೂ ಅದರ ಮರಿಯನ್ನು ರಕ್ಷಣೆ ಮಾಡಲಾಗಿದೆ.
ಮೈಸೂರು ತಾಲೂಕಿನ ಇಲವಾಲ ಹೋಬಳಿಯ ರಾಮನಹಳ್ಳಿಯಲ್ಲಿ ಭಾನುವಾರ ರಾತ್ರಿ ಚಿರತೆಗಳು ನಾಲೆಯ ನೀರು ಹರಿಸಲು ಹಾಕಿದ್ದ 300 ಮೀಟರ್ ಉದ್ದದ ಖಾಲಿ ಪೈಪ್‌ನಲ್ಲಿ ಸಿಲುಕಿದ್ದವು. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ಚಿರತೆ ಸೆರೆ ಕಾರ್ಯಾಚರಣೆ ತಂಡ ಹಾಗೂ ಪಶು ವೈದ್ಯರು ಬೋನು ಇಟ್ಟು ಚಿರತೆಗಳನ್ನು ಸೆರೆಹಿಡಿದರು. ನಂತರ ಆರೋಗ್ಯ ಪರಿಶೀಲಿಸಿ ಕಾಡಿಗೆ ರವಾನಿಸಲಾಯಿತು.
ಕಳೆದ ವರ್ಷ ಇದೇ ಪೈಪ್‌ಲೈನ್ ಒಳಗೆ ಸಿಲುಕಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರು ಜಾನುವಾರು ಹಾಗೂ ಕುರಿ, ಮೇಕೆಗಳನ್ನು ಮೇಯಿಸಲು ಈ ಪ್ರದೇಶಗಳಿಗೆ ಬರುತ್ತಾರೆ.
ಹೀಗಾಗಿ, ಬೇಟೆಯಾಡಲು ಚಿರತೆಗಳು ಇಲ್ಲಿಗೆ ಬರುತ್ತವೆ. ಎರಡು ದಿನಗಳ ಹಿಂದೆ ಚಿರತೆ ಇದೇ ಪ್ರದೇಶದಲ್ಲಿ 2 ಮೇಕೆಗಳ ಮೇಲೆ ದಾಳಿ ಮಾಡಿತ್ತು. ಅದರಂತೆ, ಭಾನುವಾರವೂ ಆಹಾರ ಅರಸಿ ಬಂದ ಸಂದರ್ಭದಲ್ಲಿ ತಾಯಿ ಹಾಗೂ ಅದರ ಮರಿ ಪೈಪ್‌ಲೈನ್ ಒಳಗೆ ಸಿಲುಕಿಕೊಂಡಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.