ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡ ಚಿರತೆ : ಸಿಬ್ಬಂದಿಗೆ ವರ್ಕ್ ಫ್ರಮ್ ಹೋಂ ಘೋಷಣೆ

sadesh_1
Published on

ಮೈಸೂರು: ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮಂಗಳವಾರ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯಿಂದ ಚಿರತೆ ಸರೆ ಕಾರ್ಯಾಚರಣೆ ಪ್ರಾರಂಭಗೊಂಡಿದೆ. ಚಿರತೆ ದಾಳಿಯ ಭೀತಿಯಿಂದ ಇನ್ಫೋಸಿಸ್ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಂ ಘೋಷಿಸಲಾಗಿದೆ.

ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆಯ ಚಲನವಲನ ಕಂಡು ಬಂದಿದ್ದು, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಕ್ಯಾಂಪಸ್‌ಗೆ ಬಾರದಂತೆ ಉದ್ಯೋಗಿಗಳಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ಪ್ರಾರಂಭಿಸಿದ್ದು, ಇದುವರೆಗೆ ಚಿರತೆಯ ಸುಳಿವು ಸಿಕ್ಕಿಲ್ಲ. ಚಿರತೆಯನ್ನು ಪತ್ತೆ ಹಚ್ಚುವ ಸಲುವಾಗಿ ಡ್ರೋನ್ ಕ್ಯಾಮರಾ ಫೂಟ್ ಪ್ಯಾಟ್ರೋಲಿಂಗ್ ಬಳಸಿ ಚಿರತೆ ಕಾರ್ಯಪಡೆ ಮುಖ್ಯಸ್ಥ ಡಾ.ಐ.ಬಿ.ಪ್ರಭುಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇನ್ಫೋಸಿಸ್ ಕ್ಯಾಂಪಸ್ ಬರೋಬ್ಬರಿ 350 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದ್ದು, ಸಾಕಷ್ಟು ಗಿಡ ಮರಗಳು, ಅಲಂಕಾರಿಗಳ ಗಿಡಗಳು ಹಾಗೂ ಕಟ್ಟಡಗಳಿಂದ ಆವೃತ್ತವಾಗಿದೆ. ಹೀಗಾಗಿ ಆಯಕಟ್ಟಿನ ಜಾಗಗಳನ್ನು ಗುರುತಿಸಿ ಕ್ಯಾಮೆರಾ ಟ್ರಾೃಪ್ ಅಳವಡಿಸಲಾಗುತ್ತಿದೆ. ಚಿರತೆಸೆರೆ ಹಿಡಿಯಲು ಕೇಜ್‌ಗಳನ್ನು ಅಳವಡಿಸಲಾಗಿದೆ. ಪಶುವೈದ್ಯಕೀಯ ತಂಡ ಸಹ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದೆ. ಇನ್ಫೋಸಿಸ್ ಕ್ಯಾಂಪಸ್ ಸಿಬ್ಬಂದಿ ಎಚ್ಚರದಿಂದ ಇರುವಂತೆ ಅರಣ್ಯಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದು, ನಿರಂತರವಾಗಿ ಕಾರ್ಯಾಚರಾಣೆ ಮುಂದುವರೆಸಿದ್ದಾರೆ.

ಈ ಕುರಿತು ಬೀದರ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ, ಮೈಸೂರು ಇನ್ಫೋಸಿಸ್ ಆವರಣದಲ್ಲಿ ಬೆಳಗ್ಗಿನ ಜಾವ 4.30ರ ಹೊತ್ತಿಗೆ ಚಿರತೆ ಕಾಣಿಸಿಕೊಂಡಿದ್ದು, ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ. ವಿಷಯ ತಿಳಿದ ಕೂಡಲೇ ಚಿರತೆ ಸೆರೆ ಹಿಡಿಯಲು ಚಿರತೆ ಕಾರ್ಯಪಡೆ ತಂಡವನ್ನು ಕಳುಹಿಸಲಾಗಿದೆ. ತಂಡದಲ್ಲಿ ಪಶುವೈದ್ಯರು, ಚಿರತೆ ಸೆರೆ ತರಬೇತಿ ಪಡೆದ 40 ಸಿಬ್ಬಂದಿ ಇದ್ದಾರೆ. ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳೂ ಸ್ಥಳದಲ್ಲಿದ್ದು, ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಿಸಿ ಟಿವಿಯಲ್ಲಿ ಚಿರತೆ ಸಂಚಾರದ ದೃಶ್ಯಗಳು ಸೆರೆಯಾಗಿದ್ದು, ಚಿರತೆ ಇರುವಿಕೆ ಖಚಿತವಾದ ಹಿನ್ನೆಲೆಯಲ್ಲಿ ತುರ್ತು ಕಾರ್ಯಾಚರ ಣೆಗೆ ಸೂಚನೆ ನೀಡಲಾಗಿದೆ. ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು, ಆತಂಕ ಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಬಲೆ, ಅರವಳಿಕೆ ಔಷಧದೊಂದಿಗೆ ಸಜ್ಜಾಗಿದ್ದಾರೆ ಎಂದರು.

ಇನ್ಫೋಸಿಸ್ ಆವರಣ ಸುಮಾರು 350 ಎಕರೆಯಷ್ಟಿದ್ದು, ಕೆಲವು ಭಾಗ ಕಾಡಿನಂತೆಯೇ ಇದೆ. ಇಲ್ಲಿ ಕಾರ್ಯಾಚರಣೆ ಸಾಹಸವೇ ಸರಿ. ಆದರೂ ಕಾರ್ಯಾಚರಣೆ ನಡೆಯುತ್ತಿದೆ. ಚಿರತೆ ಸಮೀಪದ ವಸತಿ ಪ್ರದೇಶಗಳಿಗೆ ನುಗ್ಗದಂತೆ ಸಹ ಕ್ರಮ ವಹಿಸಲಾಗಿದೆ. ಚಿರತೆ ಪತ್ತೆಗೆ ಥರ್ಮಲ್ ಕ್ಯಾಮರಾ ಅಳವಡಿಸಿದ ಡ್ರೋನ್ ಸಹ ಬಳಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶೀಘ್ರವೇ ಚಿರತೆ ಸೆರೆ ಹಿಡಿದು ಜನರ ಆತಂಕ ದೂರ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net