

ಬ್ಯಾಡಗಿ: ತಾಲೂಕಿನ ಕದರಮಂಡಲಗಿ ಭಾಗದ ಹೊಲಗಳಲ್ಲಿ ಚಿರತೆ ಕಾಣಿಸಿಕೊಂಡ ಪರಿಣಾಮ ಭಯದ ವಾತಾವರಣ ನಿಮಾಣವಾಗಿದ್ದು, ಕೂಲಿಕಾರರು ಹಾಗೂ ದನಗಾಯಿಗಳು ಹೊಲಗಳತ್ತ ತೆರಳಲು ಭಯಪಡುತ್ತಿದ್ದಾರೆ.
ಮೂರು ತಿಂಗಳ ಹಿಂದೆ ಗ್ರಾಮದಲ್ಲಿ ಚಿರತೆ ನಾಯಿ, ಕುರಿಗಳನ್ನು ತಿಂದು ಹಾಕಿತ್ತು. ಹೀಗಾಗಿ, ಇಲ್ಲಿನ ಗ್ರಾಮಸ್ಥರಿಗೆ ಭಯ ಹೋಗಿಲ್ಲ. ಶುಕ್ರವಾರ ಸಂಜೆ ರೈತರೊಬ್ಬರಿಗೆ ಚಿರತೆ ಕಂಡಿದ್ದು, ಅದನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಎಲ್ಲರ ಮೊಬೈಲ್ನಲ್ಲಿ ಹರಿದಾಡುತ್ತಿದೆ. ಹೀಗಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಜನರು ಎಚ್ಚರಿಕೆಯಿಂದಿರಲು ಗ್ರಾಮದಲ್ಲಿ ಡಂಗುರ ಹಾಕಿಸಲಾಗಿದೆ.
ತಾಲೂಕಿನ ಬಿದರಕಟ್ಟೆ, ಶಿಡೇನೂರು, ಕಾಟೇನಹಳ್ಳಿ, ಕಲ್ಲೇದೇವರು, ಕೆಂಗೊಂಡ, ಕೆರೂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತಿವೆ. ಸಾಕುಪ್ರಾಣಿಗಳಾದ ನಾಯಿ, ಹಸು, ಕುರಿಗಳನ್ನು ತಿಂದು ಹಾಕಿದ ಕೆಲ ಘಟನೆಗಳು ನಡೆದಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡ ವಿಷಯ ಚರ್ಚೆಯಲ್ಲಿದ್ದ ಅದರ ಸೆರೆಗೆ ಬೋನು ಇಡುತ್ತಾರೆ. ನಂತರ ನಾಲ್ಕಾರು ದಿನಗಳ ಬಳಿಕ ಪುನಃ ಒಯ್ದು ಅರಣ್ಯಾಧಿಕಾರಿಗಳ ಕಾರ್ಯåಲಯದಲ್ಲಿಡುತ್ತಾರೆ. ಇದನ್ನು ಹೊರತುಪಡಿಸಿ ಬೇರಾವುದೇ ಪರಿಹಾರ ಕಂಡುಹಿಡಿಯುತ್ತಿಲ್ಲ ಎಂದು ಜನರು ದೂರುತ್ತಾರೆ.
ರೈತರಿಗೆ ಒಂದೆಡೆ ಮಳೆಕಾಟ, ಮತ್ತೊಂದೆಡೆ ಕಾಡುಪ್ರಾಣಿಗಳ ಕಾಟ ಶುರುವಾಗಿದೆ. ಚಿರತೆ ಕಾಣಿಸಿಕೊಂಡ ಬಗ್ಗೆ ಅರಣ್ಯ ಇಲಾಖೆ ಕಚೇರಿಗೆ ಹೋಗಿ ತಿಳಿಸಿಬಂದರೂ ಕ್ಯಾರೆ ಎನ್ನದೆ ನೆಪಮಾತ್ರಕ್ಕೆ ಇಬ್ಬರು ಸಿಬ್ಬಂದಿ ಆಗಮಿಸಿ ಜನರಿಗೆ ಎಚ್ಚರಿಕೆ ಹೇಳಿ ಹೋಗುತ್ತಿದ್ದಾರೆ. ರೈತರಿಗೆ ಜಿಂಕೆಗಳ ಹಿಂಡು, ಕಾಡು ಹಂದಿಗಳು, ಚಿರತೆ ಕಾಡುತ್ತಿವೆ. ಅರಣ್ಯಾಧಿಕಾರಿಗಳು ಸಂಬಂಧವಿಲ್ಲದಂತಿದ್ದಾರೆ. | ಶಶಿಧರಸ್ವಾಮಿ ಛತ್ರದಮಠ, ರೈತ ಸಂಘದ ರಾಜ್ಯ ಸಮಿತಿ ಸದಸ್ಯ