

ರಟ್ಟಿಹಳ್ಳಿ: ತಾಲೂಕಿನ ಕಡೂರು ಗ್ರಾಮದ ಹೊರವಲಯದಲ್ಲಿರುವ ರೈತ ಶಂಕರಗೌಡ ಶಿರಗಂಬಿ ಎಂಬುವವರ ತೋಟದ ಮನೆಯ ಆವರಣದಲ್ಲಿ ಗುರುವಾರ ರಾತ್ರಿ 11.20ಕ್ಕೆ ಚಿರತೆ ಪ್ರತ್ಯಕ್ಷವಾಗಿದೆ.
ಮನೆಯ ಆವರಣದಲ್ಲಿದ್ದ ನಾಯಿಯ ಮೇಲೆ ಚಿರತೆ ದಾಳಿ ಮಾಡಲು ಯತ್ನಿಸಿದ್ದು, ನಾಯಿಗಳು ಬೊಗಳಲು ಪ್ರಾರಂಭಿಸಿದ ಬಳಿಕ ಚಿರತೆ ಓಡಿ ಹೋಗಿರುವ ದೃಶ್ಯ ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದೆ.
ಕಳೆದ 2 ತಿಂಗಳ ಹಿಂದೆ ಇದೇ ತೋಟದ ಮನೆಯ ಬಳಿ ಚಿರತೆ ಪ್ರತ್ಯಕ್ಷವಾಗಿ ನಾಯಿಗಳ ಮೇಲೆ ದಾಳಿ ಮಾಡಲು ಯತ್ನಿಸಿತ್ತು. ಈ ವೇಳೆ ಅರರ್ಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಿ.ಸಿ.ಕ್ಯಾಮರಾಗಳನ್ನು ಪರಿಶೀಲಿಸಿ ಸ್ಥಳದಲ್ಲಿ ಚಿರತೆಯ ಬೋನು ಇಟ್ಟಿದ್ದರು. ಕಳೆದ 15 ದಿನಗಳಿಂದ ಈ ಬೋನನ್ನು ಬೇರಡೆ ಸ್ಥಳಾಂತರಿಸಲಾಗಿತ್ತು. ಗುರುವಾರ ರಾತ್ರಿ ಚಿರತೆ ತೋಟದ ಮನೆಯ ಬಳಿ ಬಂದು ನಾಯಿಯ ಮೇಲೆ ದಾಳಿ ಮಾಡಲು ಯತ್ನಿಸಿದೆ. ರಾತ್ರಿ 11.30ಕ್ಕೆ ರೈತ ಶಂಕ್ರಗೌಡ ಶಿರಗಂಬಿ ತೋಟದ ಮನೆಗೆ ಬಂದಾಗ ನಾಯಿಗಳು ಬೊಗಳುತ್ತಿದ್ದನ್ನು ಕಂಡು ಸಿ.ಸಿ. ಕ್ಯಾಮರವನ್ನು ಪರಿಶೀಲಿಸಿದಾಗ ಚಿರತೆ ಪ್ರತ್ಯಕ್ಷವಾಗಿದೆ.
ಶುಕ್ರವಾರ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಚಿರತೆ ಪ್ರತ್ಯಕ್ಷವಾಗಿರುವುದನ್ನು ದೃಢಪಡಿಸಿ ಬೋನಿನ ವ್ಯವಸ್ಥೆ ಮಾಡಿದ್ದಾರೆ. ಪದೇಪದೆ ಈ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿರುವುದು ರೈತರಲ್ಲಿ ಅತಂಕ ಉಂಟು ಮಾಡಿದೆ. 7 ವರ್ಷದ ಹೆಣ್ಣು ಚಿರತೆ ಬೀಡು ಬಿಟ್ಟಿದ್ದು, ಚಿರತೆ ಸೆರೆಗಾಗಿ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ ವೇಳೆ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಸಂತೋಷ ಆವಕ್ಕನವರ ತಿಳಿಸಿದ್ದಾರೆ.